ಸರಳ ಜೀವಿ, ಸಹೃದಯಿ – ನಾನು ನೋಡಿದ ರಾಜಕುಮಾರ

  • ಉದಯಕುಮಾರ ಪೈ

ಚಿತ್ರಕೃಪೆ: ವಿಕಿಪೀಡಿಯ

ಮದರಾಸಿಗೆ ಹೋದಾಗ ಎಲ್ಲವೂ ತಮಿಳುಮಯ, ಕನ್ನಡ ಮಾಯ. ಇದರಿಂದಾಗಿ ಇಲ್ಲಿ ಕನ್ನಡಿಗರು ಇಲ್ಲವೇ , ಇದ್ದರೆ ಅವರನ್ನು ಎಲ್ಲಿ ಕಾಣಬಹುದು? ಎಂದು ನಾನು ಕೆಲಸಕ್ಕೆ ಸೇರಿದ ನಾರಾಯಣ ರಾಯರ ಹೊಟೇಲಿನ ಮ್ಯಾನೇಜರ್ ಅವರಲ್ಲಿ ಕೇಳಿದೆ. ಕನ್ನಡ ಮಾತನಾಡುವ ಕನ್ನಡಿಗರನ್ನು ನೋಡಬೇಕೆಂದರೆ ನೀನು ಹಬೀಬುಲ್ಲಾ ರಸ್ತೆಯಲ್ಲಿರುವ ಕರ್ನಾಟಕ ಸಂಘಕ್ಕೆ ಹೋಗಬೇಕು ಎಂದು ಹೊಟೇಲ್ ಮ್ಯಾನೇಜರ್ ವಿಶ್ವನಾಥ (ಅವರು ಕನ್ನಡಿಗರೇ) ತಮಿಳಿನಲ್ಲೇ ಹೇಳಿದರು. ಕರ್ನಾಟಕ ಸಂಘ, ಹಬೀಬುಲ್ಲಾ ರಸ್ತೆ ಎಂದು ಹೇಳಿದ್ದರಿಂದ ವಿಷಯ ಸ್ವಲ್ಪಮಟ್ಟಿಗೆ ಅಂದಾಜಾದರೂ, ಇದನ್ನು ನನ್ನ ಸೀನಿಯರ್ ಗೆಳೆಯ ನಾರಾಯಣ ನನಗೆ ಕನ್ನಡದಲ್ಲಿ ತಿಳಿಸಿ ಹೇಳಿದ. ಮದರಾಸಿನಲ್ಲಿ ಕನ್ನಡಿಗರು ಹೊರಗೆಲ್ಲ ತಮಿಳು ಮಾತನಾಡುವುದೇ ರೂಢಿ.

ಹೇಳಿದ್ದೇ ಸಾಕೆಂದು ಮರುದಿನ ಕೆಲಸದ ವಿಶ್ರಾಂತಿಯ ಸಮಯ ಹೊಟೇಲು ಎದುರು ಅಡ್ಡವಾಗಿ ಉದ್ದಕ್ಕೂ ಚಾಚಿಕೊಂಡ ಅಣ್ಣಾ ಮೇಂಪಾಲಂ (ಅಣ್ಣಾ ಮೇಲ್ಸೆತುವೆ) ಕೆಳಗಿರುವ ಝೋಪಡಿಗಳ ನಡುವಣ ಕಿರುದಾರಿಯಲ್ಲಿ ತೂರಿಕೊಂಡು ಸುಮಾರು ದೂರ ಹೋಗಿ ಎಡಕ್ಕೆ ತಿರುಗಿ ಕೋಡಂಬಾಕ್ಕಂ ರೈಲ್ವೇ ನಿಲ್ದಾಣ ದಾಟಿ, ಹಬೀಬುಲ್ಲಾ ರಸ್ತೆ ಯಲ್ಲಿ ನೇರವಾಗಿ ಹೋಗಿ (ಅಡ್ಡವಾಗಿ ಬರುವ ಉಸ್ಮಾನ ರೋಡ್ ದಾಟಿ) ಕರ್ನಾಟಕ ಸಂಘ ತಲುಪಿದೆ. ಇದನ್ನು ಬಿ. ರಾಮರಾವ್ ಕಲಾ ಮಂಟಪ ಎಂದು ಕರೆಯುತ್ತಾರೆ. ವಿಚಿತ್ರವೆಂದರೆ ಅಲ್ಲಿ , ಇಲ್ಲಿಯವರೆಗೂ ಒಂದೇ ಒಂದು ಮದುವೆ ಹೋಗಲಿ ಆರತಕ್ಷತೆಯ ಕಾರ್ಯಕ್ರಮ ನಡೆಯದೇ ಇದ್ದರೂ ತಮಿಳರು ಅದನ್ನು ಇಂದಿಗೂ ರಾಮಾರಾವ್ ಕಲ್ಯಾಣ ಮಂಡಬಂ (ಮಂಟಪ) ಎಂದೇ ಕರೆಯುತ್ತಾರೆ.

ಜಾಹೀರಾತು

ಹೀಗೆ ಕನ್ನಡಿಗರು, ಕನ್ನಡವನ್ನು ಅರಸುತ್ತ ಕರ್ನಾಟಕ ಸಂಘವನ್ನು ಎಡತಾಕಿದ ನನಗೆ , ಟಿ. ನಗರ, ಕೋಡಂಬಾಕ್ಕಂ, ಮಾಂಬಳಂ, ಪಾಂಡೀಬಜಾರ್ ಮುಂತಾದ ಪ್ರದೇಶಗಳಲ್ಲಿ ಹರಡಿರುವ ಹಾಗೂ ಅದರಾಚೆ ಅಂದರೆ, ಆವಡಿ, ಅಯನಾವರಂ, ಪೆರಂಬೂರು, ಅಣ್ಣಾನಗರ, ಗಿಂಡಿ, ಬೆಸೆಂಟ್ ನಗರ, ಪಲ್ಲಾವರಂ, ತಾಂಬರಂ ವರೆಗೆ ಪಸರಿಸಿರುವ ಕನ್ನಡ ಪ್ರಪಂಚದ ಪರಿಚಯವಾಯಿತು. ಜತೆಗೆ ರಸ್ತೆಯಲ್ಲಿ ಅಥವಾ ಇತರೆಡೆ ತಮಿಳಿನಲ್ಲೇ (ಕನ್ನಡಿಗರು ಪರಿಚಿತ ಕನ್ನಡಿಗರೊಂದಿಗೂ) ಉಭಯ ಕುಶಲೋಪರಿ ನಡೆಸುವ ಕನ್ನಡಿಗರು ಮನೆಯಲ್ಲಿ ಬಿಟ್ಟರೆ ಕರ್ನಾಟಕ ಸಂಘದಲ್ಲಿ ಕನ್ನಡದಲ್ಲಿ ಮಾತನಾಡುವ (ಇದನ್ನು ಕನ್ನಡದ ಖಾಸಗೀಕರಣ ಎನ್ನಬಹುದೇನೋ !) ಕನ್ನಡಿಗರು ರೂಢಿಸಿಕೊಂಡ ಭಾಷಾ ನೀತಿಯ ಪರಿಚಯವೂ ಆಯಿತು. ಒಂದು ವಿಷಯವನ್ನು ಹೇಳಲೇ ಬೇಕು. ನನ್ನ ವೃತ್ತಿ ಬದಲಾವಣೆಯಲ್ಲಿ ಕರ್ನಾಟಕ ಸಂಘದ ಪಾತ್ರ ಮಹತ್ವದ್ದು.

ಕೆಲಸದ ವಿಶ್ರಾಂತಿಯ ಸಮಯ (ಬೆಳಗಿನ ೧೦ ಗಂಟೆಯಿಂದ ಗಂಟೆಯವರೆಗೆ) ಸಂಘಕ್ಕೆ ಹೋಗುತ್ತಿದ್ದ ನಾನು ಪತ್ರಿಕ ಓದುವುದು, ಅಲ್ಲಿದ್ದವರೊಂದಿಗೆ ಮಾತನಾಡುವುದು ಮಾಡುತ್ತಿದ್ದೆ. ಕ್ರಮೇಣ ಸಣ್ಣ ಪುಟ್ಟ ಕೆಲಸಗಳನ್ನು (ಅಂದರೆ ಅಲ್ಲಿನ ಗ್ರಂಥಾಲಯದ ಪುಸ್ತಕಗಳನ್ನು ಅಕಾರಾಂತವಾಗಿ ಜೋಡಿಸಿಡಿವುದು, ಪುಸ್ತಕ ಕೇಳಿ ಬಂದವರಿಗೆ ಕೊಟ್ಟು, ಬರೆದಿಟ್ಟುಕೊಳ್ಳವುದು, ಕಾರ್ಯಾಲಯದ ಸಣ್ಣ ಪುಟ್ಟ ಕೆಲಸಗಳಿಗೆ ಸಹಾಯ ಮಾಡುವುದು) ಮಾಡುವ ವರೆಗೂ ಮುಂದುವರಿಯಿತು.

ರಾಜಾಜಿ ಅವರು ಮದ್ರಾಸು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ, ೯೯ ವರ್ಷಗಳ ಕಾಲ ಭೋಗ್ಯಕ್ಕೆ (ಲೀಸ್) ನೀಡಿದ ಸ್ಥಳದಲ್ಲಿ ತಲೆ ಎತ್ತಿದ ಕರ್ನಾಟಕ ಸಂಘ ನಡೆಸುತ್ತಿರುವ ಶಾಲೆಗೆ (೭೦ರ ದಶಕದಲ್ಲಿ) ಸುಸಜ್ಜಿತ ಕಟ್ಟಡವಿರಲಿಲ್ಲ. ಆದರೆ ಅತ್ಯುತ್ತಮ ಹಾಗೂ ಸುಸಜ್ಜಿತ ರಂಗಮಂದಿರ ಹಾಗೂ ವಿಶಾಲವಾದ ಸಭಾಂಗಣವಿತ್ತು. ಆರ್. ಎಸ್. ಮನೋಹರ್, ಮೇಜರ್ ಸುಂದರರಾಜನ್ ಮತ್ತಿತರ ಪ್ರಮುಖ ನಾಟಕ ಸಂಸ್ಥೆಗಳನ್ನು ನಡೆಸುವವರಿಗೆ, ಸಂಗೀತ ಕಚೇರಿ ನಡೆಸುವವರಿಗೆ ರಾಮರಾವ್ ಕಲಾ ಮಂಟಪ ಅಚ್ಚುಮೆಚ್ಚಿನದಾಗಿತ್ತು. ಹೀಗಾಗಿ ವರ್ಷದುದ್ದಕ್ಕೂ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೂ ಆರ್ಥಿಕ ಕೊರತೆಯಿಂದಾಗಿ ತಟ್ಟಿ ಕಟ್ಟಿ ಶಾಲೆಯ ತರಗತಿಗಳನ್ನು ನಡೆಸಲಾಗುತ್ತಿತ್ತು. ಹೀಗಾಗಿ ದಾನಿಗಳಿಂದ ದೇಣಿಗೆ ಪಡೆಯಲು ಹಾಗೂ ಹೊಸದಾಗಿ ಮದರಾಸಿಗೆ ಪರಿಸರದಲ್ಲಿ ಬಂದ ಕನ್ನಡಿಗರ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಕೇಳಿಕೊಳ್ಳಲು ವರ್ಷದಲ್ಲಿ ಕೆಲವು ಬಾರಿ (ಮೂರೋನಾಲ್ಕು ಬಾರಿ) ಒಂದು ತಿರುಗಾಟವೂ ನಡೆಯುತ್ತಿತ್ತು. ತಿರುಗಾಟ ಭಾನುವಾರ ನಡೆಯುತ್ತಿತ್ತು. ಶಾಲೆಯ ಮುಖ್ಯೋಪಾಧ್ಯಾಯಿನಿ ಸ್ವಯಂ ಬರುತ್ತಿದ್ದರು. ಕಾಕತಾಳೀಯ ಎಂಬಂತೆ ಭಾನುವಾರ ನನ್ನ ಹೊಟೇಲಿಗೆ ರಜೆಯಾಗಿದ್ದರಿಂದ ಜನರನ್ನು, ಇತರ ಪ್ರದೇಶಗಳನ್ನು ನೋಡಿದಂತಾಯಿತು ಎಂದು ನಾನೂ ಜತೆ ನೀಡುತ್ತಿದ್ದೆ.

ಜಾಹೀರಾತು

ಇಂಥ ತಿರುಗಾಟದ ಸಮಯ (ಒಂದು ನಿರ್ದಿಷ್ಟ ದೂರದ ವರೆಗೆ ಬಸ್ ನಲ್ಲಿ ಹೋದರೆ ಮಿಕ್ಕಿದ್ದೆಲ್ಲ ಕಾಲ್ನಡಿಗೆ) ಹಲವು ಕನ್ನಡಿಗರ ಮನೆಗಳಿಗೆ ಭೇಟಿ ನೀಡುತ್ತಿದ್ದೆವು. ಹಾಗೆಯೇ ವಡಪಳನಿ (ರಾಮ್ ಥಿಯೇಟರ್ ಸಮೀಪ ಪಿಳ್ಳೈಯಾರ್ ಕೋಯಿಲ್ ಸ್ಟ್ರೀಟ್ ನಲ್ಲಿರುವ) ಯಲ್ಲಿ ತಾರೆ ಪಂಡರೀಬಾಯಿ (ಅವರು ನಿರ್ಮಿಸಿದ ಪಾಂಡುರಂಗ ದೇವಸ್ಥಾನ ಇಂದಿಗೂ ಇದೆ. ಅಂದು ದೇವಸ್ಥಾನದ ಒಂದೆಡೆ ಉಚಿತ ಕನ್ನಡ ತರಗತಿಗಳು ನಡೆಯುತ್ತಿದ್ದವು)ಅವರ ಹಾಗೂ ಟ್ರಸ್ಟ್ ಪುರಂ ಎರಡನೇ ಬೀದಿಯಲ್ಲಿರುವ ರಾಜಕುಮಾರ ಅವರ ಮನೆಗೂ ಶಾಲೆಯ ಮುಖ್ಯೋಪಾಧ್ಯಾಯಿನಿಯವರೊಂದಿಗೆ (ಅವರ ಹೆಸರು ನೆನಪಿಲ್ಲ. ೮೦ರ ದಶಕದಲ್ಲಿ ಅವರು ದಕ್ಷಿಣ ಆಫ್ರಿಕಾಗೆ ಹೋದರು) ಒಂದೆರಡು ಬಾರಿ ಹೊಗಿದ್ದೆ. ! ನೀವೀಗ ಕರ್ನಾಟಕ ಸಂಘದ ಶಾಲೆಯಲ್ಲಿ ಇದ್ದೀರಾ ? ಎಂದು ರಾಜಕುಮಾರ ಕುತೂಹಲದಿಂದ ಕೇಳಿದರು. ಇಲ್ಲ, ನಾರಾಯಣ ರಾಯರ ಕೋಡಂಬಾಕ್ಕಂ ಹೊಟೇಲಿನಲ್ಲೇ ಕೆಲಸ ಮಾಡುತ್ತಿದ್ದೇನೆ. ಇವತ್ತು ರಜಾ ಆಗಿದ್ದರಿಂದ ಇವರ ಜತೆ ಬಂದೆ ಎಂದು ಚುಟುಕಾಗಿ ಉತ್ತರಿಸಿದೆ‌. ಇನ್ನೊಂದು ವಿಷಯವೆಂದರೆ ನಾವು ಭೇಟಿ ನೀಡಿದ ಮನೆಗಳಲ್ಲೆಲ್ಲ ಕಾಫಿ, ಲಿಂಬೆ ಹಣ್ಣಿನ ಶರಬತ್ತು ಹೀಗೆ ಯಾವುದಾದರೂ ಒಂದು ಉಪಚಾರ ನಡೆಯುತ್ತಿತ್ತು. ಹಾಗೆಯೇ ಪಂಡರೀಬಾಯಿ ಹಾಗೂ ರಾಜಕುಮಾರ ಮನೆಯಲ್ಲಿ ಮೊದಲಿಗೆ ನೀರು ಕೊಟ್ಟು ಮಾತನಾಡುತ್ತ, ತಿಂಡಿ, ಕಾಫಿ ಸ್ವೀಕರಿಸುವುದು ಕಡ್ಡಾಯ ಎಂಬಂತಾಗಿತ್ತು. ನಾವು ಸಂಕೋಚ ಮಾಡಿದರೆ, ನೀವು ತಟ್ಟೆ ಖಾಲಿ ಮಾಡಿದರೆ, ನಾನು ನಿಮ್ಮ ಹೆಸರು ಹೇಳಿ ಇನ್ನೊಂದು ಸಲ ತಿನ್ನಬಹುದು ಎಂದು ನಮ್ಮ ದಾಕ್ಷಿಣ್ಯವನ್ನು ಹೋಗಲಾಡಿಸುತ್ತಿದ್ದರು. ಜತೆಗೆ ಬಂದ ಕೆಲಸವೂ ಆಗುತ್ತಿತ್ತು. ನಾವು ಅವರ ಮನೆಗೆ ಭೇಟಿ ನೀಡುವ ಉದ್ದೇಶವನ್ನು ದಂತವೈದ್ಯರೂ, ಕರ್ನಾಟಕ ಸಂಘದ ಕಾರ್ಯದರ್ಶೀಯವರೂ ಆದ ಪಾಂಗಾಳ ಶ್ರೀನಿವಾಸ ರಾವ್ (‘ಚಕ್ರತೀರ್ಥಚಿತ್ರದಲ್ಲಿ ರಾಜಕುಮಾರ ಸ್ನೇಹಿತನ ಪಾತ್ರದಲ್ಲಿ ಅವರು ನಟಿಸಿದ್ದಾರೆ) ತಿಳಿಸಿ ಕೆಲಸವನ್ನು ಸುಲಭಗೊಳಿಸುತ್ತಿದ್ದರು.

ಅಂದು ರಾಜಕುಮಾರ ಮನೆಗೆ ಪೂರ್ತಿಯಾಗಿ ಆವರಣ ಗೋಡೆ ಇರಲಿಲ್ಲ. ಎದುರು ರಸ್ತೆಯಿಂದ ಹಾದು ಹೋಗುವವರು ಮನೆಯ ಮೊಗಸಾಲೆಯಲ್ಲಿರುವವರನ್ನು ನೋಡಬಹುದಿತ್ತು. ಜತೆಗೆ ಅಂಥ ಯಾವ ಆಡಂಬರವೂ ಇರಲಿಲ್ಲ. ಜನಪ್ರಿಯ ಹಾಗೂ ಕನ್ನಡದ ಪ್ರಮುಖ ನಟ ಇಷ್ಟೊಂದು ಸರಳವಾದ ಮನೆಯಲ್ಲಿರುವುದು ನನಗೆ ಅಚ್ಚರಿಯ ವಿಷಯವಾಗಿತ್ತು. ‘ಯಾರಿವನುಚಿತ್ರಕ್ಕಾಗಿ ಊಟಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ರಾಜಕುಮಾರ ಹಾಗೂ ಚಿತ್ರ ತಂಡದ ಮೇಲೆ ಹಲ್ಲೆಯಾದ ಬಳಿಕ ಭದ್ರತೆಗಾಗಿ ಮನೆಯ ಸುತ್ತ ಎತ್ತರದ ಆವರಣ ಗೋಡೆ ಕಟ್ಟಲಾಯಿತು. ಜತೆಗೆ ಸೆಕ್ಯುರಿಟಿಗೆ ಒಬ್ಬನನ್ನು ನಿಯಮಿಸಲಾಯಿತು. ಆಗಲೂ ಬರುವವರಿಗೆ ಮುಕ್ತ ಅವಕಾಶವಿದ್ದರೂ, ಯಾರು, ಯಾರನ್ನು ನೋಡಲು ಎಂದು ಔಪಚಾರಿಕವಾಗಿ ಕೇಳಲಾಗುತ್ತಿತ್ತು. ಘಟನೆ ನಡೆಯುವ ಸ್ವಲ್ಪ ಕಾಲ ಮೊದಲು ಬೆಂಗಳೂರಿನ ಸದಾಶಿವ ನಗರದ ಡಾಲರ್ಸ್ ಕಾಲನಿಯಲ್ಲಿರುವ ನಿರ್ಮಾಪಕ, ಸ್ಟುಡಿಯೋ ಒಡೆಯ .ವಿ.ಮೆಯ್ಯಪ್ಫ ಚೆಟ್ಟಿಯಾರ್ ಅವರಿಗೆ ಸೇರಿದ ಮನೆಯನ್ನು ರಾಜಕುಮಾರ ಖರೀದಿಸಿದ್ದು, ಬಳಿಕ ಬೆಂಗಳೂರಿಗೆ ಸ್ಥಳಾಂತರಗೊಂಡರು.

(ಮುಂದುವರಿಯುವುದು)

ಜಾಹೀರಾತು

FOR OLD ARTICLES CLICK HERE

ಚಿತ್ರಾನ್ನ ಕಾಲದ ನೆನಪುಗಳು

ಜಾಹೀರಾತು

ವಿಜಯಚಿತ್ರ, ರೂಪತಾರಾ ಪತ್ರಿಕೆಗಳಲ್ಲಿ ದಶಕಗಳ ಕಾಲ ಸಿನಿಮಾ ಪತ್ರಕರ್ತರಾಗಿ ಚೆನ್ನೈ, ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಉದಯ ಕುಮಾರ್ ಪೈ ಸದ್ಯ ಮಣಿಪಾಲದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಕನ್ನಡ ಸಿನಿಮಾದ ಬ್ಲ್ಯಾಕ್ ಅಂಡ್ ವೈಟ್ ಯುಗದಿಂದ ಇಂದಿನವರೆಗಿನ ಸಿನಿಮಾಗಳು, ನಟರ ಬದುಕನ್ನು ಹತ್ತಿರದಿಂದ ನೋಡಿರುವ ಅವರು ಡಾ. ರಾಜ್ ಕುಮಾರ್ ಕುರಿತು ಸರಣಿ ಬರೆಹಗಳನ್ನು ಬರೆದಿದ್ದಾರೆ. 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸರಳ ಜೀವಿ, ಸಹೃದಯಿ – ನಾನು ನೋಡಿದ ರಾಜಕುಮಾರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*