ಚಿತ್ರಾನ್ನ ಕಾಲದ ನೆನಪುಗಳು

  • ಉದಯಕುಮಾರ್ ಪೈ

ಅಂದು ತಮಿಳುನಾಡಿನ ಚಿತ್ರರಂಗದಲ್ಲಿ ಮಕ್ಕಳ್ ತಿಲಗಂ ಎಂಜಿಆರ್- ನಡಿಗರ್ ತಿಲಗಂ ಶಿವಾಜಿ ಗಣೇಶನ್ ಹಾಗೂ ಕಾದಲ್ ಮನ್ನನ್ ಜೆಮಿನಿ ಗಣೇಶನ್ (ಇವರು ಬ್ರಾಹ್ಮಣರಾಗಿದ್ದರಿಂದ ‘ಸಾಂಬಾರ್’ ಎಂಬ ಉಪ ನಾಮದಿಂದ ಕರೆಯುತ್ತಿದ್ದರು) ಈ ತ್ರಿಮೂರ್ತಿಗಳದೇ ಕಾರುಬಾರು.

ಜಾಹೀರಾತು

ಅದರಲ್ಲಿ ಎಂಜಿಆರ್ ಹಾಗೂ ಶಿವಾಜಿ ಗಣೇಶನ್ ಅಭಿಮಾನಿಗಳದ್ದಂತೂ ಜಿದ್ದಾಜಿದ್ದೀ-ಗುದ್ದಾಗುದ್ದಿ ಅಭಿಮಾನ. ಹೊಟೇಲು ಕಾರ್ಮಿಕರಲ್ಲಿ ಅವರ ಅಭಿಮಾನಿಗಳು ಹೇರಳ. ಎಂಜಿಆರ್ ಅಥವಾ ಶಿವಾಜಿ ಗಣೇಶನ್ ಅವರ ಹೊಸ ಸಿನಿಮಾ ಬಿಡುಗಡೆಯಾದರೆ, ಅಥವಾ ಅತ್ಯಂತ ಜನಪ್ರಿಯವಾದ ಅವರ ಹಳೆಯ ಚಿತ್ರದ ಮರು ಬಿಡುಗಡೆಯಾದಾಗ, ಮೊದಲ ಶೋಗಾಗಿ ಮೊದಲ ಟಿಕೆಟ್ ಪಡೆದು ಚಿತ್ರ ನೋಡದಿದ್ದರೆ ಜನ್ಮವೇ ವ್ಯರ್ಥ ಎಂಬಂಥ ಉತ್ಕಟ ಅಭಿಮಾನ. ಇದರಿಂದಾಗಿ ಕೆಲಸಗಾರರು ಕೆಲಸಕ್ಕೆ ಚಕ್ಕರ್, ಥಿಯೇಟರಿಗೆ ಹಾಜರ್ ಎಂಬಂಥ ವಾತಾವರಣವಿತ್ತು. ಇದು ಕೆಲಸಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಅದು ಹೇಗೆಂದರೆ, ಹೊಸ ಚಿತ್ರ ಬಿಡುಗಡೆಯಾಗುವ ಕುರಿತು ತಿಂಗಳ ಮೊದಲೇ ಪತ್ರಿಕೆಯಲ್ಲಿ ಪ್ರಚಾರ ಆರಂಭವಾಗುತ್ತಿತ್ತು. ಅದಕ್ಕೆ ಅಭಿಮಾನಿಗಳು ಸಂಪನ್ಮೂಲ ಕ್ರೋಡೀಕರಿಸುತ್ತಾರೆ. ಏಕೆಂದರೆ ಕೌಂಟರಿನಲ್ಲಿ ಟಿಕೆಟ್ ಸಿಗದಿದ್ದರೆ ಬ್ಲಾಕ್ ನಲ್ಲಾದರೂ ಟಿಕೆಟ್ ಪಡೆಯಬೇಕಲ್ಲ! ಇದು ಈ ಹಿಂದೆ ಜನಪ್ರಿಯವಾದ ಚಿತ್ರದ ಮರು ಬಿಡುಗಡೆಗೂ ಅನ್ವಯಿಸುತ್ತದೆ.

ಆದರೆ ಇದಕ್ಕೆ ಎರಡು ವಾರಗಳ ಅವಕಾಶ ಮಾತ್ರ. ಈ ಶುಕ್ರವಾರ ಒಂದು ಚಿತ್ರ ಬಿಡುಗಡೆಯಾಗುತ್ತದೆ ಎನ್ನೋಣ. ಅಲ್ಲಿನ ಹೊಟೇಲುಗಳಲ್ಲಿ ಅಂದು ವಾರದ ಸಂಬಳದ ಪದ್ಧತಿ ಇದ್ದು, ಪ್ರತಿ ಬುಧವಾರ ರಾತ್ರಿ ಕೆಲಸಗಾರನಿಗೆ ಅಡ್ವಾನ್ಸ್ ಕೊಡಲಾಗುತ್ತಿತ್ತು. ಹೀಗೆ ಸಿಗುವ ಅಡ್ವಾನ್ಸನ್ನು ಜೇಬಿಗಿಳಿಸಿದ ಕೆಲಸಗಾರ, ಗುರುವಾರ ಹತ್ತು ಗಂಟೆಗೆ ರೆಸ್ಟ್ ಗೆ ಹೊರಟವನು ಪಟ್ಟಾಗಿ ತಿಂದು (ಈ ಮಹಾ ಘನ ನೈವೇದ್ಯ ಬೆಳಗಿನ ಉಪಾಹಾರದಿಂದಲೇ ಪ್ರಾರಂಭವಾಗುತ್ತದೆ) ಹೋಗಿ ಸೇರುವುದು ಸಂಬಂಧಪಟ್ಟ ಥಿಯೇಟರಿನ ಸರತಿಯ ಸಾಲಿನಲ್ಲಿ. ಶತಾಯ ಗತಾಯ ಸಿನಿಮಾ ನೋಡಿದ ಬಳಿಕವೇ ಅವನು ಕೆಲಸಕ್ಕೆ ಬರುವುದು. ಅದೃಷ್ಟವಶಾತ್ ಶುಕ್ರವಾರವೇ ಅವನು ಚಿತ್ರ ನೋಡಿದರೆ, ಶೋ ಮುಗಿದ ಬಳಿಕ ಹೊರಬಂದು ಮತ್ತೆ ಕ್ಯೂನಲ್ಲಿ ನಿಲ್ಲುತ್ತಾನೆ. ಶನಿವಾರ ಚಿತ್ರ ನೋಡಲು ಸಾಧ್ಯವಾದರೆ ಸರಿ, ಅಡ್ವಾನ್ಸ್ ಬುಕ್ಕಿಂಗ್ ಕಾರಣ ಸಾಧ್ಯವಾಗದಿದ್ದಲ್ಲಿ ಅಲ್ಲೇ ಕ್ಯೂನಲ್ಲಿ ನಿಂತು ಭಾನುವಾರ ಹೇಗಾದರೂ ನೋಡಿಯೇ ನೋಡುತ್ತಾನೆ.

ಈ ಟಿಕೆಟ್ ಪಡೆಯುವ ಸಾಹಸದಲ್ಲಿ ಕೆಲವೊಮ್ಮೆ ಅಂಗಿ ಹರಿದು ಹೋಗುವ ಪ್ರಸಂಗಗಳೂ ಇವೆ. ಅದು ಅವನಿಗೆ ಹೆಮ್ಮೆಯ ವಿಷಯ. ತನ್ನ ‘ಮರತ್ತಿನ್ ಅಡೈಯಾಳಂ’ (ಪರಾಕ್ರಮದ ಗುರುತು) ಎಂದು ಹೇಳಿಕೊಳ್ಳುತ್ತಾನೆ. ಹಾಗೂ-ಹೀಗೂ ಸಿನಿಮಾ ನೋಡಿ ಜೇಬಿನಲ್ಲಿ ಕಾಸು ಉಳಿದರೆ ಟೀಕ್ಕಡೆ (ಮಲಯಾಳಿಗಳ ಚಹಾ ಅಂಗಡಿ)ಯಲ್ಲಿ ಚಹಾ ಕುಡಿದು, ಅದೆಲ್ಲೋ ಮಲಗಿ, ಸೋಮವಾರದಂದು ಹಸಿದ ಹೊಟ್ಟೆಯಲ್ಲಿ ಯಾವುದೋ ಹೊಟೇಲು ಮಾಲಕನ ಬಳಿ ತಲೆ ಕೆರೆದುಕೊಳ್ಳುತ್ತ ಕೆಲಸ ಕೇಳುತ್ತಾನೆ.

ಜಾಹೀರಾತು

ಆ ಮಾಲಕನ ಬಳಿ ಅವನು ಅದೆಷ್ಟನೇ ಬಾರಿ ಕೆಲಸಕ್ಕೆ ಸೇರಿದನೆಂಬುದು ಅವನಿಗೂ, ಆ ಮಾಲಕನಿಗೂ ನೆನಪಿರುವುದಿಲ್ಲ. ಇದರಲ್ಲಿ ಒಂದು ವಿಶೇಷವೆಂದರೆ ಯಾವ ಹೊಟೇಲಿನಿಂದ ಗುರುವಾರ ಹೊರ ಬಂದನೋ, ಆ ಹೊಟೇಲಿಗೆ ಮೂರುದಿನ ಬಿಟ್ಟು ಅಂದರೆ ಸೋಮವಾರ ಕೆಲಸಕ್ಕೆ ಹೋಗುವುದಿಲ್ಲ. ಹಾಗೆ ಪುನಃ ಹೋಗುವುದಾದರೆ ಒಂದು ತಿಂಗಳ ಅಂತರ ಕಾಯ್ದುಕೊಳ್ಳುತ್ತಾನೆ. ಹೀಗೆ ಸಿನಿಮಾ ವ್ಯಾಮೋಹದಿಂದ ಕೆಲಸಕ್ಕೆ ಚಕ್ಕರ್ ಹೊಡೆಯುವ, ಮತ್ತೆ ಪುನಃ ಬಂದು ಕೆಲಸ ಕೇಳುವ ಕಾರ್ಮಿಕನಿಗೆ ಯಾವ ಮಾಲಕ ಸೂಕ್ತ ಸಂಬಳ ಕೊಡುತ್ತಾನೆ ?ಒಂದು ಸಿನಿಮಾಕ್ಕೆ ಆಗುವಷ್ಟು, ಮೇಲೆ ಒಂದಿಷ್ಟು ವೆಚ್ಚಕ್ಕೆ ಹೀಗೆ ವಾರದಲ್ಲಿ ಅವನ ಸಂಬಳ ಹತ್ತು ರೂಪಾಯಿ ಮೀರುವುದಿಲ್ಲ. ಹೊಟೇಲು ಮಾಲಕರಿಗೆ ಕೆಲಸಕ್ಕೆ ಜನವೂ ಕಡಿಮೆ ಬೀಳುವುದಿಲ್ಲ. ಇದು ಎಲ್ಲ ಕೆಲಸಗಾರರ ಮೇಲೆ ಪರಿಣಾಮ ಬೀರುವ ವಿಷಯ( ದೊಡ್ಡ ಹೊಟೇಲುಗಳಲ್ಲಿ ಪರಿಸ್ಥಿತಿ ಹೀಗಿಲ್ಲ. ಅದು ಬೇರೆ ವಿಷಯ). ಇದಕ್ಕೆ ಹೊರತಾಗಿ ನಾವು ಮೂವರು ಕೆಲಸ ನೆಚ್ಚಿಕೊಂಡಿದ್ದರಿಂದಾಗಿ, ಮಾಲಕರಿಗೆ ನಮ್ಮ ಮೇಲೆ ಸ್ವಲ್ಪ ವಿಶ್ವಾಸ. ಹೀಗಾಗಿ ಎವಿಎಂ ಸ್ಟುಡಿಯೋ ಎದುರಿಗಿರುವ ಅವರದೇ ಆದ ಇನ್ನೊಂದು ಹೊಟೇಲಿಗೆ ಸರದಿಯಂತೆ ನಮ್ಮ ಮೂವರಲ್ಲಿ ಆಗಾಗ ಒಬ್ಬರನ್ನು , ಕೆಲವೊಮ್ಮೆ ಇಬ್ಬರನ್ನು ಬಿಟ್ಟ ಸ್ಥಳ ತುಂಬಲು ಕಳಿಸುತ್ತಿದ್ದರು.

ಆರಂಭ ಕಾಲದಲ್ಲಿ ಕೆಲವು ಸಂಸ್ಥೆಗಳನ್ನು ಬಿಟ್ಟರೆ, ಆರ್ಥಿಕ ಅಶಕ್ತತೆಯಿಂದಾಗಿ ಸೆಟ್ ಗಳನ್ನು ಹಾಕಲು ಸಾಧ್ಯವಾಗದ ಕನ್ನಡ ಚಿತ್ರ ನಿರ್ಮಾಪಕರು, ಇತರ ಭಾಷೆಯ ಚಿತ್ರಗಳಿಗೆ ಹಾಕಿದ ಸೆಟ್ ಗಳಲ್ಲಿ ತಮಗೆ ಸೂಕ್ತವಾದುದನ್ನು ಆಯ್ಕೆ ಮಾಡಿಕೊಂಡು ಚಿತ್ರೀಕರಣ ನಡೆಸುತ್ತಿದ್ದರು. ಹಾಗಾಗಿ ಮದರಾಸಿನಲ್ಲಿ ಕನ್ನಡ ಚಿತ್ರಗಳ ಚಿತ್ರೀಕರಣ ರಾತ್ರಿಯ ಸಮಯ ನಡೆಯುತ್ತಿತ್ತು (ಎಲ್ಲ ಚಿತ್ರಗಳೆಂದು ಭಾವಿಸಬೇಕಾಗಿಲ್ಲ) . ಹಾಗಾಗಿ ಕನ್ನಡ ಚಿತ್ರರಂಗದವರಿಗೆ ‘ನೈಟ್ ರಾಜಾಕ್ಕಳ್’ (ರಾತ್ರಿ ರಾಜರು) ಎಂಬ ಅಡ್ಡ ಹೆಸರಿತ್ತು. ಹಾಗೆಯೇ ಬಾಣಸಿಗರನ್ನು ಇಟ್ಟುಕೊಂಡು ಊಟ-ತಿಂಡಿಯ ವ್ಯವಸ್ಥೆ ಮಾಡಲಾಗದುದರಿಂದ, ಸ್ಟುಡಿಯೋ ಸಮೀಪ ಇರುವ ಹೊಟೇಲುಗಳನ್ನು (ಅಂದು ಜನ ವಸತಿ ಅಥವಾ ಜನ ಸಂಚಾರವೇ ಇಲ್ಲದ ಪ್ರದೇಶಗಳಲ್ಲಿದ್ದ ಸ್ಟೂಡಿಯೋಗಳ ಸಮೀಪ ಸಮೀಪ ಸುಮಾರಾದ ಅಂದರೆ ತೀರ ಸಣ್ಣದಲ್ಲದ ಹೊಟೇಲುಗಳು ಸ್ಟೂಡಿಯೋಗಳನ್ನು ನಂಬಿದ್ದವು)ಅವಲಂಬಿಸಿದ್ದರು. ಊಟಕ್ಕೆ ಚಿತ್ರಾನ್ನ, ತೆಂಗಿನ ಅನ್ನ, ಪುಳಿಯೋಗರೆ, ಮೊಸರನ್ನ (ಇವುಗಳಲ್ಲಿ ಮೊಸರನ್ನ ಕಡ್ಡಾಯವಾಗಿದ್ದು, ಉಳಿದಂತೆ ಜತೆಗೆ ಯಾವುದಾದರೂ ಒಂದು) ಇದರೊಂದಿಗೆ ‘ಕೀರೆ ವಡೆ’ಎಂದು ಹೇಳುವ ಹರಿವೆ ಸೊಪ್ಪಿನ ವಡೆ ನೀಡಲಾಗುತ್ತಿತ್ತು. ನಾಯಕ-ನಾಯಕಿಗೂ ಇದೇ ಮೆನು. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ‘ಚಿತ್ರಾನ್ನದ ಕಂಪೆನಿ’ ಎಂಬ ಸರ್ವನಾಮವೂ ಇತ್ತು. ಹೀಗೆ ಕನ್ನಡ ಚಿತ್ರರಂಗದ ಹಸಿವು ನೀಗಿಸುತ್ತಿದ್ದ ಹೊಟೇಲುಗಳ ಪೈಕಿ , ನನ್ನನ್ನು ಆಗಾಗ ಕಾರ್ಮಿಕರ ಕೊರತೆ ನೀಗಲು ಕಳಿಸುತ್ತಿದ್ದ ಎವಿಎಂ ಸ್ಟೂಡಿಯೋ ಸಮೀಪ ಇರುವ ಹೊಟೇಲು ಕೂಡ ಒಂದು. ಅಂದಿನ ಕನ್ನಡ ಚಿತ್ರರಂಗಕ್ಕೂ ಅದು ಆಪ್ತವಾಗಿತ್ತು.

ಜಾಹೀರಾತು

ಮೈಸೂರು ರಾಜ್ಯದ ಹಣಕಾಸು ಸಚಿವರಾಗಿದ್ದ ರಾಮಕೃಷ್ಣ ಹೆಗಡೆಯವರು ಕನ್ನಡ ಚಿತ್ರಗಳಿಗೆ ಸಹಾಯಧನ ನೀಡಲು ಆರಂಭಿಸಿದ್ದು ಹಾಗೂ ಕನ್ನಡದಲ್ಲೂ ಒಳ್ಳೆಯ ಚಿತ್ರಗಳು ಬರುತ್ತಿವೆ ಎಂಬುದು ಕನ್ನಡಿಗರಿಗೆ ಮನವರಿಕೆಯಾದ ಪರಿಣಾಮ ೭೦ರ ದಶಕದಲ್ಲಿ ಕನ್ನಡ ಚಿತ್ರರಂಗ ಸಾಕಷ್ಟು ಚೇತರಿಸಿಕೊಂಡಿತು. ತಮ್ಮ ಚಿತ್ರಗಳಿಗಾಗಿಯೇ ಸೆಟ್ ಹಾಕಿಕೊಳ್ಳುವುದು, ಬಾಣಸಿಗರನ್ನಿಟ್ಟುಕೊಂಡು ತಮ್ಮ ಚಿತ್ರತಂಡಕ್ಕೆ ಅಚ್ಚುಕಟ್ಟಾಗಿ ಊಟ-ತಿಂಡಿ ಒದಗಿಸುವ ಸ್ಥಿತಿಗೆ ನಿರ್ಮಾಪಕರು ಬಂದರು. ಆದರೂ ಹಳೆಯ ತಲೆಮಾರಿನವರು ಸಂಕಟದ ದಿನಗಳಲ್ಲಿ ತಮ್ಮನ್ನು ಸಾಕಿ ಸಲುಹಿದ ಚಿತ್ರಾನ್ನ, ಮೊಸರನ್ನ ಹಾಗೂ ಅವನ್ನು ಪೂರೈಸಿ, ಪೊರೆದ ಹೊಟೇಲುಗಳನ್ನು ಮರೆತಿರಲಿಲ್ಲ. ಹಾಗಾಗಿ ಎವಿಎಂ, ಗೋಲ್ಡನ್, ಪ್ರಸಾದ್ ಸ್ಟೂಡಿಯೋಗಳಲ್ಲಿ ಕನ್ನಡ ಚಿತ್ರಗಳ ಚಿತ್ರೀಕರಣ ನಡೆಯುತ್ತಿದ್ದರೆ, ವಾರದಲ್ಲಿ ಎರಡು ದಿನವಾದರೂ ಅಂಥ ಹೊಟೇಲುಗಳಿಂದ ವಿವಿಧ ಅನ್ನಗಳನ್ನು ತರಿಸಿ ಸವಿಯುತ್ತ, ಅಂದಿನ ದಿನಗಳನ್ನು ಮೆಲುಕು ಹಾಕುತ್ತಿದ್ದರು. ಹೀಗೆ ಎವಿಎಂ ಹಾಗೂ ಪ್ರಸಾದ್ ಸ್ಟೂಡಿಯೋದಲ್ಲಿ ಕನ್ನಡ ಚಿತ್ರಗಳ ಚಿತ್ರೀಕರಣ ನಡೆಯುತ್ತಿದ್ದಾಗ ಒಂದೆರಡು ಬಾರಿ ಇಂಥ ವಿವಿಧ ಅನ್ನಗಳನ್ನು, ಕೀರೆವಡೆಯ ಪಾರ್ಸೆಲ್ ಪೊಟ್ಟಣಗಳನ್ನು ಮಂಕರಿಯಲ್ಲಿ ಹಾಕಿಕೊಂಡು (ಜತೆಗೊಂದಿಬ್ಬರು ಇರುತ್ತಿದ್ದರು) ಸ್ಟೂಡಿಯೋಗಳಿಗೆ ಹೋಗಿ ನೀಡಿ ಬರುವ ಅವಕಾಶ ನನಗೆ ಒದಗಿ ಬಂದಿತ್ತು.

ಹಾಗೆ ಹೋದಾಗ ಎರಡು ಬಾರಿ ರಾಜಕುಮಾರ ಅವರಿಗೂ ಈ ಪಾರ್ಸೆಲ್ ಪೊಟ್ಟಣ ನೀಡಿದ್ದೆ. ‘ಓಹೋ ! ನೀವು ಈಗ ಇಲ್ಲಿಗೂ ಬಂದ್ರಾ ? ಎಲ್ಲಿ ಕೆಲಸ ಮಾಡುತ್ತಿದ್ದೀರಿ ?’ ಎಂದು ರಾಜಕುಮಾರ ಕೇಳಿದರು. ‘ಇಲ್ಲೇ, ಎವಿಎಂ ಸ್ಟೂಡಿಯೋ ಹತ್ತಿರ, ನಾರಾಯಣ ರಾಯರ ಉಡುಪಿ ಹೊಟೇಲಿನಲ್ಲಿ ‘ ಎನ್ನುತ್ತಿದ್ದಂತೆ, ‘ಹೌದಾ ? ರಾಯರು ಚೆನ್ನಾಗಿದ್ದಾರಾ ? ಅವರೇ ನೋಡಿ ನಮ್ಮನ್ನು ಸಾಕಿದ್ದು. ಈ ಪೊಟ್ಟಣದ ಅನ್ನದ ರುಚಿ ಮರೆಯೋಕ್ಕಾಗಲ್ಲ. ಹಾಗಾಗಿ ಯಾವಾಗಲಾದರೂ ಒಮ್ಮೆ ಇಂಥ ಚಿತ್ರಾನ್ನ-ಮೊಸರನ್ನ ತರಿಸಿ ರುಚಿ ಸವಿಯುತ್ತೇವೆ. ನಮ್ಮ ಹಸಿದ ಹೊಟ್ಟೆಗೆ ಅನ್ನ ಕೊಟ್ಟ ರಾಯರು ಚೆನ್ನಾಗಿರಬೇಕು’ ಎಂದು ಹೇಳಿದ ರಾಜಕುಮಾರ ಮಾತಿನಲ್ಲಿ ಮೆಚ್ಚುಗೆ ಹಾಗೂ ಕೃತಜ್ಜತಾಭಾವ ಮೇಳೈಸಿದ್ದವು. ಕೆಲಸದವನಾದ ನಾನು ಪುನಃ ಮಾತನಾಡಲಿಲ್ಲ. ಕೆಲಸ ಮುಗಿಸಿ ಹೊಟೇಲಿಗೆ ಮರಳಿದೆ. ರಾಜಕುಮಾರ ಹೇಳಿದ್ದನ್ನು ರಾಯರಿಗೆ ತಿಳಿಸಿದೆ. ಅವರು ಸಂತಸಪಟ್ಟರು.

ಜಾಹೀರಾತು

ಇದರಲ್ಲಿ ಇನ್ನೂ ಒಂದು ವಿಷಯವೆಂದರೆ, ಶೂಟಿಂಗ್ ಏನಾದರೂ ಬೇಗ ಮುಗಿದರೆ, ಕೆಲವೊಮ್ಮೆ ಎವಿಎಂ ಸಮೀಪದ ಈ ಉಡುಪಿ ಹೊಟೇಲಿಗೆ ಬಂದು(ಜತೆಗೆ ಒಂದಿಷ್ಟು ಜನರೂ ಇರುತ್ತಿದ್ದರು) ಪಕೋಡಾ (ಈರುಳ್ಳಿ ಪಕೋಡಾ ಅಥವಾ ಮೆದು ಪಕೋಡಾ ಹೀಗೆ ಯಾವುದಾದರೂ ಒಂದು ) ಇಲ್ಲವೇ ಮಸಾಲೆವಡೆ ತಿಂದು, ಚಹಾ ಕುಡಿದು, ಕೆಲಸದವರೋಂದಿಗೆ, ಗಲ್ಲಾದಲ್ಲಿ ಕುಳಿತ ನಾರಾಯಣ ರಾಯರೊಂದಿಗೆ ಮಾತನಾಡಿ ಹೋಗುತ್ತಿದ್ದರು. (ಪಕೋಡಾ ಕಟ್ಟಿಸಿಕೊಂಡು ಹೋಗಿದ್ದೂ ಉಂಟು) ಬಿಲ್ ಕೊಡುವುದು ಮಾತ್ರ ಅವರ ತಮ್ಮ ವರದಪ್ಪ. ಈಗ ಕನ್ನಡ ಚಿತ್ರರಂಗ ಕರ್ನಾಟಕದಲ್ಲಿ ನೆಲೆ ಕಂಡುಕೊಂಡಿದೆ. ಹಾಗೆಯೇ ಅಲ್ಲಿನ ಸ್ಟುಡಿಯೋಗಳಲ್ಲಿ ಧಾರಾವಾಹಿಗಳು ಚಿತ್ರೀಕರಣವಾಗುತ್ತಿವೆ. ಜನ ಸಂಚಾರವೇ ಇಲ್ಲದ ಮದರಾಸಿನ ಸ್ಟೂಡಿಯೋಗಳಿರುವ ಸಾಲಿಗ್ರಾಮ ಜನ ನಿಬಿಡವಾಗಿದೆ. ದೊಡ್ಡ-ದೊಡ್ಡ ಮಾಲ್ ಗಳು ಬಂದಿವೆ. ದೊಡ್ಡ ದೊಡ್ಡ ಹೊಟೇಲುಗಳು ತಲೆ ಎತ್ತಿವೆ. ಸಣ್ಣ ಹೊಟೇಲುಗಳು ಇತಿಹಾಸ ಸೇರಿವೆ. ಅಂಥ ಕೆಲವು ಹೊಟೇಲುಗಳು ಕೈ ಬದಲಾವಣೆಯಾಗಿ ಸಾಲಿಗ್ರಾಮದ ವಾಸ್ತು ವಿನ್ಯಾಸ ಬದಲಾಗಿ ಹೋಗಿದೆ. ಆದರೆ ಈ ನೆನಪುಗಳು ನನ್ನಲ್ಲಿ ಶಾಶ್ವತ.
(ಮುಂದುವರಿಯುವುದು)

ಉದಯ ಕುಮಾರ್ ಪೈ

ವಿಜಯಚಿತ್ರ, ರೂಪತಾರಾ ಪತ್ರಿಕೆಗಳಲ್ಲಿ ದಶಕಗಳ ಕಾಲ ಸಿನಿಮಾ ಪತ್ರಕರ್ತರಾಗಿ ಚೆನ್ನೈ, ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಉದಯ ಕುಮಾರ್ ಪೈ ಸದ್ಯ ಮಣಿಪಾಲದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಕನ್ನಡ ಸಿನಿಮಾದ ಬ್ಲ್ಯಾಕ್ ಅಂಡ್ ವೈಟ್ ಯುಗದಿಂದ ಇಂದಿನವರೆಗಿನ ಸಿನಿಮಾಗಳು, ನಟರ ಬದುಕನ್ನು ಹತ್ತಿರದಿಂದ ನೋಡಿರುವ ಅವರು ಡಾ. ರಾಜ್ ಕುಮಾರ್ ಕುರಿತು ಸರಣಿ ಬರೆಹಗಳನ್ನು ಬರೆದಿದ್ದಾರೆ. ಅದರ ಎರಡನೇ ಕಂತು ಇದು

ಹಿಂದಿನ ಕಂತು ಓದಲು ಕ್ಲಿಕ್ ಮಾಡಿರಿ

ಜಾಹೀರಾತು

ನಾನು ನೋಡಿದ ರಾಜಕುಮಾರ

 

ಜಾಹೀರಾತು

 

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಚಿತ್ರಾನ್ನ ಕಾಲದ ನೆನಪುಗಳು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*