ಗ್ರಾಮಾಭಿವೃದ್ಧಿಯೊಂದಿಗೆ ಬ್ರಹ್ಮಕಲಶೋತ್ಸವ: ಕುಂಡಡ್ಕದ ಯಶೋಗಾಥೆ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಕುಂಡಡ್ಕ ಕ್ಷೇತ್ರಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿಗಳಿಗೆ ಈ ಲಿಂಕ್ ಒತ್ತಿರಿ: http://harivaani.com/

ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶ ಕಾರ್ಯಕ್ರಮಗಳು ಕರಾವಳಿ ತೀರದಲ್ಲಿ ನಡೆಯುತ್ತಿರುತ್ತದೆ. ಆದರೆ ಇಲ್ಲೊಂದು ಜೀರ್ಣೋದ್ಧಾರ ಕಾರ್ಯ ತನ್ನ ವಿಶಿಷ್ಟತೆಯಿಂದ ಊರ, ಪರವೂರ ಭಕ್ತರನ್ನಷ್ಟೇ ಅಲ್ಲ, ಜಿಲ್ಲೆಯ ಆಡಳಿತವನ್ನೂ ಅತ್ತ ನೋಡುವಂತೆ ಮಾಡಿದೆ.

ವಿಶಿಷ್ಟವಾದ ಶೈಲಿಯಲ್ಲಿ ದೇವಸ್ಥಾನದೈವಸ್ಥಾನಗಳ, ಗ್ರಾಮದ ಇತರ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಕಾರ್ಯವನ್ನು ಇಡೀ ಗ್ರಾಮ ನಡೆಸಿದ್ದು, ಮಾದರಿ ಎನಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸೀಮೆಯ ವಿಟ್ಲ ಅರಮನೆಯ ಪೂರ್ವಭಾಗ ವಿಟ್ಲಮುಡ್ನೂರು. ಕುಳ ಮತ್ತು ವಿಟ್ಲಮುಡ್ನೂರು ಎರಡು ಗ್ರಾಮಗಳ ಗ್ರಾಮ ದೇವಸ್ಥಾನ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಗ್ರಾಮ ದೈವಸ್ಥಾನ ಶ್ರೀ ಮಲರಾಯಶ್ರೀ ಮೂವರ್ ದೈವಂಗಳ ದೈವಸ್ಥಾನದ ಆಡಳಿತವು ವಿಟ್ಲ ಅರಮನೆಯ ಅರಸರ ಹಾಗೂ ಕರ್ಗಲ್ಲುನೂಜಿ ಮನೆತನ, ಕುಂಡಡ್ಕಕುಡ್ವಮನೆತನ, ಕುಳ ಮನೆತನ, ಕುಂಡಡ್ಕ ಮನೆತನಗಳ ಮುಂದಾಳುತ್ವದಲ್ಲಿ ನಡೆಯುತ್ತಿದ್ದು, ಉತ್ಸವಾದಿ ಸೇವಾ ಕಾರ್ಯಗಳು ಮನೆತನಗಳ ಹಾಗೂ ಊರ ಸಮಸ್ತರ ಉಪಸ್ಥಿತಿಯಲ್ಲಿ ನಡೆಯುತ್ತಿದೆ. ದೇಗುಲದ ಬ್ರಹ್ಮಕಲಶೋತ್ಸವವು ಫೆ.5ರಿಂದ 15ರ ವರೆಗೆ ನಡೆಯಲಿದೆ. ಫೆ.10ಕ್ಕೆ ಶ್ರೀ ದೇವರ ಪುನಃಪ್ರತಿಷ್ಠೆ, ರಾಜದರ್ಬಾರ್, 13ರಂದು ಬ್ರಹ್ಮಕಲಶ, 14ರಂದು ಜಾತ್ರೋತ್ಸವ, 15ರಂದು ಶಿಬರಿಕಲ್ಲ ಮಾಡ ದೈವಗಳ ಸನ್ನಿಽಗೆ ಸ್ಥಾನ ಪ್ರದಾನಕ್ಕೆ ಗೊನೆಮುಹೂರ್ತ, 21ಕ್ಕೆ ಸ್ಥಾನ ಪ್ರದಾನ, ಶುದ್ಧಿ ಕಲಶಾಭಿಷೇಕ, ಅಂಗಣದ ಬಂಟರ ನೇಮೋತ್ಸವ, 22ರಂದು ಮೂವರ್ ದೈವಂಗಳ ನೇಮೋತ್ಸವ, 23ರಂದು ಮಲರಾಯ ದೈವದ ನೇಮೋತ್ಸವ ನಡೆಯಲಿದೆ.

400 ವರ್ಷಗಳ ಇತಿಹಾಸವಿರುವ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಶಿಬರಿಕಲ್ಲು ಮಾಡದ ಶ್ರೀ ಮಲರಾಯಮೂವರ್ ದೈವಂಗಳ ದೈವಸ್ಥಾನವು ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡ ವಿಟ್ಲ ಸೀಮೆಯ ಅರಸರುಸಂಬಂಧಿಸಿದ ನಾಲ್ಕು ಮನೆತನದವರು ಹಾಗೂ ಸಮಸ್ತ ಗ್ರಾಮಸ್ಥರು ಒಟ್ಟಾಗಿ ಜೀರ್ಣೋದ್ಧಾರ ಕಾರ್ಯ ನಡೆಸಲು ತೀರ್ಮಾನಿಸಿದರು.

ಗ್ರಾಮಸ್ಥರಿಂದಲೇ 2.6 ಕೋಟಿ ರೂ. ಸಂಗ್ರಹ:

1997ರಲ್ಲಿ ದೇಗುಲದ ಬ್ರಹ್ಮಕಲಶ ನಡೆಸಲಾಗಿತ್ತು. ಮತ್ತೆ ಎರಡು ವರ್ಷಗಳ ಹಿಂದೆ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಯಿತು. ಮಧ್ಯಮವರ್ಗದ ಮತ್ತು ಕಾರ್ಮಿಕ ವರ್ಗದ ಶ್ರಮಜೀವಿಗಳೇ ತುಂಬಿರುವ ಗ್ರಾಮದ 1260 ಮನೆಗಳ ಭಕ್ತರು ತಾವೇ ಒಗ್ಗೂಡಿ, ಪ್ರತೀ ವಾರ, ತಿಂಗಳ ಲೆಕ್ಕಾಚಾರದಲ್ಲಿ ಹಣ ಕೂಡಿಟ್ಟು, ಸುಮಾರು 2.6 ಕೋಟಿ ರೂ.ಗಳನ್ನು ಸಂಗ್ರಹಿಸಿ, ಅತ್ಯಂತ ವೈಭವದ ದೇವಸ್ಥಾನದೈವಸ್ಥಾನವನ್ನು ಪುನರ್ನಿರ್ಮಿಸಿದ್ದಾರೆ. ಶ್ರೀ ವಿಷ್ಣುಮೂರ್ತಿ ದೇವರ ಬದಿಕೆರೆ ಆದಿಸ್ಥಳದ ಜೀರ್ಣೋದ್ಧಾರ, ಜೈನರಕೋಡಿ ಶ್ರೀ ಮೂವರು ದೈವಂಗಳ ಹಾಗೂ ಡೆಚ್ಚಾರು ಮಲರಾಯ ದೈವದ ಭಂಡಾರ ಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡು, . ಮತ್ತು ೧೦ರಂದು ಶುದ್ಧಿಕಲಶ ಸಂಪನ್ನಗೊಂಡಿದೆ. ಎಲ್ಲ ಕಾರ್ಯಗಳಿಗೆ ಸರಕಾರದ ಅನುದಾನವನ್ನು ಬಯಸದೇ, ಪಡೆಯದೇ ಸ್ವಾವಲಂಬಿಗಳಾಗಿ ಆದರ್ಶ ಮೆರೆದಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಮಿಕ್ಕಿದ ಕಾರ್ಯಕರ್ತರಿಂದ ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮೊತ್ತದ ಶ್ರಮಸೇವೆ ಸಾಧನೆ ಗಮನಾರ್ಹ.

ದೇಗುಲವು ಧ್ವಜಾಯದಲ್ಲಿ ನಿರ್ಮಾಣಗೊಂಡಿದೆ. ನಮಸ್ಕಾರ ಮಂಟಪ, ಸುತ್ತುಗೋಪುರಗಳನ್ನು ಹೊಂದಿದೆ. ಗರ್ಭಗುಡಿಯು ಎರಡು ಮಾಡಿನದ್ದಾಗಿದೆ. ತಾಮ್ರದ ಮಾಡನ್ನು ಹೊಂದಿದೆ. ಗರ್ಭಗುಡಿಯ ಸುತ್ತಲೂ ಕೆತ್ತನೆಗಳು ಆಕರ್ಷಣೀಯವಾಗಿದ್ದು ಭಕ್ತಿ, ಭಾವವನ್ನು ಹೊರಹೊಮ್ಮಿಸುವುದಕ್ಕೆ ಕಾರಣವಾಗಿದೆ. ವಿಷ್ಣುವಿನ 24(ಚತುರ್ವಿಂಶತಿ) ರೂಪಗಳು, ನವದುರ್ಗೆಯರು, ನವಗ್ರಹರು, ನಾಲ್ಕು ವೇದಗಳ ಮೂರ್ತಿಗಳು, ವಿಶ್ವರೂಪದರ್ಶನ, ಸುದರ್ಶನ ಚಕ್ರದ ಸ್ವರೂಪ, ಬ್ರಹ್ಮ, ವಿಷ್ಣು, ಮಹೇಶ್ವರ, ಆಂಜನೇಯ, ಶ್ರೀರಾಮ, ಬೆಣ್ಣೆಕೃಷ್ಣ ಮತ್ತು ಕೃಷ್ಣರಾಜ ಸೇರಿ ಒಟ್ಟು ೫೮ ಸ್ವರೂಪಗಳು ಕೆತ್ತನೆಗಳು ಅತ್ಯದ್ಭುತವಾಗಿ ಮೂಡಿಬಂದಿವೆ. ಕೆಂಪು ಗೋಡೆಯಲ್ಲಿ ಕೃಷ್ಣಶಿಲೆಯಲ್ಲಿ ಇವುಗಳನ್ನು ಕೆತ್ತಲ್ಪಟ್ಟಿವೆ.

ಶ್ರೀ ವಿಷ್ಣುಮೂರ್ತಿ ದೇವರು ಇಲ್ಲಿ ಪ್ರಧಾನ ದೇವರು. ಪವಿಸ್ಸನ್ನು ಹಿಡಿದ ಜನಾರ್ದನ ರೂಪಿ. ಕೇಳಿದ್ದನ್ನು ಕೊಡುವುದು ಅವನ ವಿಶೇಷತೆ. ಜತೆಗೆ ಪರಿವಾರ ದೇವತೆಗಳಾಗಿ ಶ್ರೀ ಗಣಪತಿ, ಶ್ರೀ ಶಾಸ್ತಾರರ ಕೃಪೆಯೂ ಇದೆ. ಶಿಬರಿಕಲ್ಲ ಮಾಡದಲ್ಲಿ ದೈವದ ಸ್ಥಾನ ಪ್ರದಾನಕ್ಕೆ ಸಂಬಧಿಸಿದ ಕೈಂಕರ್ಯವೂ ನಡೆಯುತ್ತಿದೆ. 250 ಅಡಿಗಳಿಗಿಂತ ಎತ್ತರದ ಏಕಶಿಲೆಯಲ್ಲಿ ಮೂವರ್ ದೈವಂಗಳ ದೈವಸ್ಥಾನದ ಸೊಬಗು ಭಕ್ತ ಸಾಮ್ರಾಜ್ಯವನ್ನು ಆಕರ್ಷಿಸುತ್ತದೆ. ಸೊಬಗು ಬೇರೆಲ್ಲಿಯೂ ಸಿಗದು ಎಂದರೆ ಅತಿಶಯೋಕ್ತಿಯಾಗಲಾರದು. ಏಕಶಿಲೆಯ ಮೇಲೆ ಎರಡು ಮಾಡಿನ, ತಾಮ್ರದ ಹೊದಿಕೆಯ ದೈವಸ್ಥಾನವೂ ಎದ್ದು ನಿಂತಿದೆ.

ಆಮಂತ್ರಣ ವಿತರಣೆ ವಿಶಿಷ್ಟ :

ಬ್ರಹ್ಮಕಲಶದ ಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ಬ್ರಹ್ಮಕಲಶದ ಸಿದ್ಧತೆ ಭರದಿಂದ ನಡೆಯುತ್ತಿದೆ. ಆಮಂತ್ರಣ ಪತ್ರಿಕೆಯೇ ವಿಶಿಷ್ಟ ಶೈಲಿಯಲ್ಲಿದ್ದು, ಹರಿವಾಣಿ ಎಂದು ನಾಮಾಂಕಿತವಾಗಿದೆ. ಕಲಶದ ಆಕಾರದಲ್ಲಿ ಸುಮಾರು 20 ಪುಟಗಳ ಆಮಂತ್ರಣ ತಯಾರಾಗಿದೆ. ಇತರ ಆಮಂತ್ರಣಗಳೂ ಇವೆ. ವಿಶೇಷವೆಂದರೆ ಆಮಂತ್ರಣ ಪತ್ರಿಕೆಯಲ್ಲಿ ಬ್ರಹ್ಮಕಲಶ ಸಮಿತಿಯ ಯಾವುದೇ ಪದಾಧಿಕಾರಿಗಳ ಹೆಸರುಗಳಿಲ್ಲ. ಆರಂಭದ ಒಂದು ಪುಟದಲ್ಲಿ ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರ ಪತ್ರವಿದೆ, ಅದರಲ್ಲಿ ಭಕ್ತರನ್ನು ಆಮಂತ್ರಿಸಲಾಗಿದೆ. ಗ್ರಾಮದ ೧೨೬೦ ಮನೆಗಳಿಗಲ್ಲದೇ, ಪ್ರತೀ ಮನೆಯವರ ಬಂಧುಗಳಿಗೆ ನೀಡಲು ೨೫ ಆಮಂತ್ರಣ ಒದಗಿಸಲಾಗಿದೆ. ನೆರೆಯ ಎಂಟು ಗ್ರಾಮಗಳಿಗೆ ೯೦೦೦ ಆಮಂತ್ರಣ ಮತ್ತು ಜಿಲ್ಲೆ, ಹೊರ ಜಿಲ್ಲೆ ಹಾಗೂ ದೇಶ ವಿದೇಶಗಳ ಭಕ್ತರಿಗೆ ಸೇರಿ ಒಟ್ಟು ೫೦ ಸಾವಿರ ಆಮಂತ್ರಣ ವಿತರಿಸಲಾಗಿದೆ. ಜಿಲ್ಲೆಯಾದ್ಯಂತ ಅಲ್ಲಲ್ಲಿ ಕಾರ್ಯಕ್ರಮ ಆಯೋಜಿಸಿ, ಭಕ್ತರನ್ನು ಆಮಂತ್ರಿಸಲಾಗಿದೆ. ..ಜಿಲ್ಲೆಯಾದ್ಯಂತ ೨೦೫೦ ಬಟ್ಟೆಯ ಬ್ಯಾನರ್‌ಗಳು, ಪ್ರಮುಖ ಸ್ಥಳಗಳಲ್ಲಿ ೭೫ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಅನೇಕ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಇದಲ್ಲದೇ ಆಧುನಿಕ ತಂತ್ರಜ್ಞಾನಗಳಾದ ಫೇಸ್‌ಬುಕ್, ವಾಟ್ಸಾಪ್ ಇತ್ಯಾದಿಗಳ ಮೂಲಕವೂ ಭರ್ಜರಿ ಪ್ರಚಾರ ನಡೆಸಲಾಗಿದೆ. ಮಂದಿಯ ೧೦೦ ತಂಡ ಮನೆ ಮನೆಗೆ ತೆರಳಿ ಆಮಂತ್ರಿಸಿದ ರೀತಿ ಭಾರೀ ವಿಶೇಷವಾಗಿದೆ. ನಾಲ್ಕು ದಿವಸಗಳಲ್ಲಿ ನೆರೆಯ ಗ್ರಾಮಗಳಿಗೆ ಆಮಂತ್ರಣ ನೀಡಲಾಗಿದೆ.ಬ್ರಹ್ಮಕಲಶದ ಪ್ರತಿದಿನವೂ ೨೫ ಸಾವಿರ ಮಂದಿ ಭಕ್ತರನ್ನು ನಿರೀಕ್ಷಿಸಲಾಗಿದೆ. ದೇಗುಲದ ಜೀರ್ಣೋದ್ಧಾರಕ್ಕೆ ಗ್ರಾಮದ ಹೊರಗಿನ ಭಕ್ತರನ್ನಾಗಲೀ ಸರಕಾರವನ್ನಾಗಲೀ ನಂಬದೇ ಅದ್ವಿತೀಯ ಸಾಧನೆ ಮಾಡಿದ್ದು, ಬ್ರಹ್ಮಕಲಶ ಸಂಭ್ರಮಕ್ಕೆ ವಸ್ತು ರೂಪದ ಹಾಗೂ ಧನರೂಪದ ಸಹಕಾರವನ್ನು ಭಕ್ತರೆಲ್ಲರ ಅಪೇಕ್ಷೆಯ ಮೇರೆಗೆ ಸ್ವೀಕರಿಸಲು ತೀರ್ಮಾನಿಸಲಾಗಿದೆ. ಯಾವುದೇ ರೀತಿಯ ಕೊಡುಗೆಯನ್ನೂ ಸ್ವೀಕರಿಸಲಾಗುತ್ತದೆ. ಈಗಾಗಲೇ ಕೆಲವರು ಧನರೂಪದಲ್ಲಿ ಅಕ್ಕಿ, ಬೇಳೆ, ಇತರ ದಿನಸಿ ಸಾಮಗ್ರಿಗಳ ರೂಪದಲ್ಲಿ ಉದಾರ ಕೊಡುಗೆಗಳನ್ನು ನೀಡುತ್ತೇವೆಂದು ಘೋಷಿಸಿದ್ದಾರೆ. ಭಕ್ತರು ಸೇವಾ ರೂಪದಲ್ಲಿ ಹಾಗೂ ಅನ್ನದಾನ ಮತ್ತಿತರ ರೂಪದ ಸೇವೆಗಳನ್ನು ಸ್ವೀಕರಿಸಲಾಗುತ್ತದೆ.

ಧಾರ್ಮಿಕ ವಿಧಿ ವಿಧಾನಗಳಿಗೆ ಕೃತಕ ವಸ್ತುಗಳನ್ನು ಬಳಸದೇ, ಅಥವಾ ಖರೀದಿಸದೇ, ವೈದಿಕ ಕಾರ್ಯಗಳಿಗೆ ಹಳ್ಳಿಯ ಭಾಗಗಳಲ್ಲಿ ಸಿಗುವ ಸಾಮಗ್ರಿಗಳನ್ನೇ ಬಳಸಲಾಗುತ್ತದೆ. ಸ್ವಾವಲಂಬಿ ಗ್ರಾಮದ ವಿಚಾರವಾಗಿ ಆಹಾರದ ವ್ಯವಸ್ಥೆಗಾಗಿ ತರಕಾರಿಯನ್ನು ಗ್ರಾಮದಲ್ಲೇ ಬೆಳೆಯಲಾಗುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಹಲವು ಮಂದಿ ಕೃಷಿಕರು ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಆದರೆ ಅದು ಪೂರ್ತಿ ವ್ಯವಸ್ಥೆಯನ್ನು ಪೂರೈಸಲಾರದು. ಸ್ವಾವಲಂಬೀ ಯೋಜನೆಯ ಮೂಲಕ ಸಫಲತೆಯನ್ನು ಪಡೆದ ಗ್ರಾಮ ರಾಜ್ಯದಲ್ಲೇ ವಿಭಿನ್ನ ರೀತಿಯ ಯೋಜನೆಗಳನ್ನು ರೂಪಿಸಿಕೊಂಡಿದೆ.

ಬ್ರಹ್ಮಕಲಶಕ್ಕೆ ದೇಗುಲದ ಸುತ್ತಲೂ ಸುಮಾರು ೧೦ ಸಾವಿರ ಚದರ ಅಡಿ ಚಪ್ಪರ ನಿರ್ಮಿಸಲಾಗುತ್ತದೆ. ಅಲ್ಲದೇ ೨೫ ಸಾವಿರ ಚದರ ಅಡಿಯ ಸಭಾಂಗಣ, ಅನ್ನಸಂತರ್ಪಣೆಗೆ ೪೫ ಸಾವಿರ ಚದರ ಅಡಿಯ ಚಪ್ಪರ, ೧೦ ಸಾವಿರ ಚದರ ಅಡಿಯ ಅಡುಗೆ ಶಾಲೆ, ಸಾವಿರ ಚದರ ಅಡಿಯ ಉಪಾಹಾರ ಗೃಹ, ಸಾವಿರ ಚದರ ಅಡಿಯ ಉಗ್ರಾಣ, ೪೫ ಸಾವಿರ ಚದರ ಅಡಿಯ ಹೊರೆಕಾಣಿಕೆ ಸಂಗ್ರಹ ಕೊಠಡಿ, ವ್ಯಾಪಾರ ಮಳಿಗೆಗೆ ೮೦ ಸ್ಟಾಲ್‌ಗಳನ್ನು ಹಾಗೂ ಸಾವಿರ ಚದರ ಅಡಿಯ ವೃತ್ತಾಕಾರದ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ. ವಾಸ್ತು ಪ್ರಧಾನವಾದ ಅರಮನೆ ಶೈಲಿಯ ಕಾರ್ಯಾಲಯ ನಿರ್ಮಾಣವಾಗುತ್ತಿದೆ.

ಹವನಗಳು :

ಕಳೆದ ಎರಡೂವರೆ ವರ್ಷಗಳಿಂದ ಪ್ರತೀ ಸಂಕ್ರಮಣದಂದು ಗ್ರಾಮದ ಮಹಿಳೆಯರು ಸೇರಿಕೊಂಡು ಜೀರ್ಣೋದ್ಧಾರ ಸಂಕಲ್ಪದೊಂದಿಗೆ ಸಾಮೂಹಿಕವಾಗಿ ಕುಂಕುಮಾರ್ಚನೆ ನಡೆಸುತ್ತ ಬಂದಿದ್ದಾರೆ. ಜೀರ್ಣೋದ್ಧಾರ ಪೂರ್ಣತೆಯ ಸಂಕಲ್ಪದ ಸಮಾರೋಪವಾಗಿ ಬ್ರಹ್ಮಕಲಶ ಸಂಭ್ರಮದಲ್ಲಿ ಕುಂಕುಮಾರ್ಚನೆ ನಡೆಯಲಿದೆ. ಬ್ರಹ್ಮಕಲಶ ಬಳಿಕವೂ ಪ್ರತೀ ಸಂಕ್ರಮಣದಂದು ಪ್ರಕ್ರಿಯೆ ಮುಂದುವರಿಯುತ್ತದೆ.

ಏಳು ದಿನಗಳ ಕಾಲ ೧೦ ಕುಂಡಗಳಲ್ಲಿ ವಿದ್ವಜ್ಜನರಲ್ಲದೇ ಭಕ್ತಾದಿಗಳೂ ವ್ರತಧಾರಿಗಳಾಗಿ ಲಕ್ಷ ಹವಿಸ್ಸು ಸಮರ್ಪಿಸಿ, ರಾಮತಾರಕ ಹವನ ನೆರವೇರಿಸಲಿದ್ದಾರೆ. ಅದಲ್ಲದೇ ವಿಷ್ಣು ಸಹಸ್ರನಾಮ ಹವನ, ೧೦೦೮ಕ್ಕೂ ಅಽಕ ಊರ ಪರವೂರ ಮಹಿಳೆಯರು ಏಕಕಾಲಕ್ಕೆ ಲಲಿತಾ ಸಹಸ್ರ ನಾಮ ಪಠನ, ಹವನ ಮಾಡಲಿದ್ದಾರೆ. ಗಣಪತಿ ಹವನ, ಮೃತ್ಯುಂಜಯ ಹವನ, ಮನ್ಯುಸೂಕ್ತ ಹವನ, ಚಂಡೀ ಜಪ, ಚಂಡೀ ಹವನ, ನವಗ್ರಹಶಾಂತಿ ಹವನ, ಪುರುಷಸೂಕ್ತ ಹವನ, ರುದ್ರ ಹವನ, ಲಕ್ಷ್ಮೀನಾರಾಯಣ ಹೃದಯ ಹವನ, ಭಜನೆ, ಗೋಪೂಜೆ ನಡೆಯಲಿದೆ.

ಅಭಿವೃದ್ಧಿ :

ಬ್ರಹ್ಮಕಲಶ ಸಂಭ್ರಮದಲ್ಲಿ ಗ್ರಾಮ ಸಮೃದ್ಧಿಯನ್ನು ಮಾಡಿಕೊಂಡ ಗ್ರಾಮಸ್ಥರು ರಾಜಕೀಯ, ಜಾತಿ, ಮತ ಬೇಧಗಳಿಲ್ಲದೇ ಒಗ್ಗಟ್ಟಿನಿಂದ ಬೃಹತ್ ಸಾಧನೆಯನ್ನು ಮಾಡಿದ್ದಾರೆ. ನೀರು, ಆಹಾರ ಮತ್ತು ಇತರ ಮೂಲಭೂತ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ರಸ್ತೆ ಅಭಿವೃದ್ಧಿಯ ಕೊರತೆ ಇದ್ದಾಗ ಶ್ರಮದಾನದ ಮೂಲಕ ಅದನ್ನು ಅಭಿವೃದ್ಧಿಪಡಿಸಿದ್ದಾರೆ. ಗ್ರಾಮಸ್ಥರ ಶ್ರಮಕ್ಕೆ ಜನಪ್ರತಿನಿಽಗಳೂ ಸೇರಿ, ಗ್ರಾಮಕ್ಕೆ ಮಹತ್ವದ ಕೊಡುಗೆ ನೀಡಿರುವುದು ವಿಶೇಷ ಶ್ಲಾಘನೆಗೆ ಪಾತ್ರವಾಗಿದೆ. ಜೀರ್ಣೋದ್ಧಾರ ಕಾರ್ಯ ಎಂದಾಕ್ಷಣ ಹೆಚ್ಚಿನ ಕಡೆಗಳಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಅಭಿವೃದ್ಧಿಗೇ ಮೀಸಲಾಗಿ ಬಿಡುತ್ತದೆ ಹೊರತು, ಊರಿನ ಜನರನ್ನು ಒಗ್ಗೂಡಿಸುವ ಗೋಜಿಗೆ ಯಾರೋ ಮುಂದಾಗುವುದಿಲ್ಲ. ಆದರೆ ಈ ಊರಿನಲ್ಲಿ ಎಲ್ಲಾ ಮನೆಗಳನ್ನು ಒಗ್ಗೂಡಿಸಿಕೊಂಡು ದೇವಾಲಯದ ಜತೆಗೆ ಊರಿನ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ.

ಊರಿನ ಕೇಂದ್ರ ಉದ್ಧಾರ ಆಗುವ ಹಾಗೆ ಗ್ರಾಮವೂ ಆಹಾರ – ನೀರು – ಬೆಳಕಿನಲ್ಲಿ ಸ್ವಾವಲಂಬನೆಯನ್ನು ಕಾಯ್ದುಕೊಳ್ಳಬೇಕು. ಇದರ ಜತೆಗೆ ಶೈಕ್ಷಣಿಕ ಹಾಗೂ ಆರೋಗ್ಯಕ್ಕೂ ಆತೀ ಅಗತ್ಯವಿದ್ದಲ್ಲಿ ಆರ್ಥಿಕ ಸಹಕಾರವನ್ನು ನೀಡಲಾಗುತ್ತಿದೆ. ಈ ಮೂಲಕ ಗ್ರಾಮ ಸಮೃದ್ಧಿಯ ಕನಸನ್ನು ಕಾಣಲಾಗಿದೆ. ಪಾಳು ಬಿದ್ದ ಗದ್ದೆಗಳನ್ನು ಮೊದಲ ಹಂತದಲ್ಲಿ ಅಭಿವೃದ್ಧಿಗೆ ಮುಂದಾಗಲಾಗಿದ್ದು, ಮೂರು ವರ್ಷಗಳಿಂದ ಗದ್ದೆ ಬೇಸಾಯ ನಡೆಸಲಾಗುತ್ತಿದೆ. ಮೊದಲ ಎರಡು ವರ್ಷ ಸುಮಾರು ೫ ಎಕರೆ ಜಾಗದಲ್ಲಿ ಬೇಸಾಯ ನಡೆದರೆ ಈ ವರ್ಷ ೭ ಎಕರೆ ಜಾಗದಲ್ಲಿ ಬೇಸಾಯ ಮಾಡಲಾಗಿದೆ. ಸುಮಾರು ೧೦೦ ಕ್ವಿಂಟಾಲ್ ಬತ್ತವನ್ನು ಊರಿನವರ ಸಹಕಾರದಲ್ಲೇ ಬೆಳೆಯಲಾಗಿದೆ. ಮುಂದಿನ ದಿನದಲ್ಲಿ ತರಕಾರಿ ಸೇರಿ ದಿನ ನಿತ್ಯ ಬಳಕೆಯ ಆಹಾರವನ್ನು ಬೆಳೆಯುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಎರಡು ವರ್ಷದಿಂದ ಗ್ರಾಮದಲ್ಲಿ ಹರಿಯುವ ತೊರೆಗಳಿಗೆ ಸುಮಾರು ೪೦ ಕಿಂಡಿ ಅಣೆಕಟ್ಟು ಅವನ್ನು ಕಟ್ಟುವ ಮೂಲಕ ನೀರಿನ ಸಂಗ್ರಹ ಮಾಡುವ ಕಾರ್ಯಕ್ಕೆ ಕೈಜೋಡಿಸಲಾಗಿದೆ. ಪಂಚಾಯಿತಿ ನೆರವಿನ ಕಿಂಡಿ ಅಣೆಕಟ್ಟು, ಮರಳು ಮಣ್ಣಿನ ಅಣೆಕಟ್ಟುಗಳನ್ನು ಮಾಡಲಾಗಿದೆ. ಮಳೆ ನೀರಿನ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ದೇವಾಲಯದ ಬಳಿಯಲ್ಲಿ ಸುಮಾರು ೧ಲಕ್ಷ ಲೀ. ಸಾಮರ್ಥ್ಯದ ಸಂಪ್ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಇದನ್ನು ಊರಿನ ಮನೆ ಮನೆಗೆ ವಿಸ್ತರಿಸುವ ಆಲೋಚನೆ ಸಮಿತಿಗೆ ಇದೆ. ವಿದ್ಯುತ್ತನ್ನೇ ಆಶ್ರಯಿಸುವ ಬದಲಾಗಿದೆ ಬೆಳಕಿನಲ್ಲಿ ಸ್ವಾವಲಂಭನೆಯನ್ನು ಸಾಧಿಸಬೇಕೆಂಬ ನಿಟ್ಟಿನಲ್ಲಿ ಈ ಗ್ರಾಮಗಳಲ್ಲಿ ಸೌರ ಶಕ್ತಿಯನ್ನು ಮನೆಗಳಲ್ಲಿ ಬಳಸಬೇಕೆಂಬ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಯೋಜನೆಯ ಮೂಲಕ ಪ್ರತಿ ಮನೆಗೂ ಎರಡು ಸೋಲಾರ್ ದೀಪವನ್ನು ವಿತರಿಸಿ ಬೆಳಕಿನಲ್ಲೂ ಸ್ವಾವಲಂಭನೆಯನ್ನು ಸಾಧಿಸುವ ಆಲೋಚನೆಯಲ್ಲಿ ಗ್ರಾಮಸ್ಥರಿದ್ದಾರೆ.

ಹೊರೆಕಾಣಿಕೆಗೆ ವಿಶೇಷ
ಬ್ರಹ್ಮಲಶೋತ್ಸವದಲ್ಲಿ ಗ್ರಾಮದಿಂದ ಬರುವ ಹೊರೆ ಕಾಣಿಕೆ ಮಾತ್ರ ವಿಶಿಷ್ಠವಾಗಿದೆ. ಪ್ರತಿ ಮನೆಯಲ್ಲಿ ತಾವೇ ಬೆಳೆದ ತರಕಾರಿಯನ್ನು ಹೊರೆಕಾಣಿಕೆಯ ಮೂಲಕ ಸಮರ್ಪಣೆ ಮಾಡುವ ಯೋಜನೆಯನ್ನು ಸಮಿತಿಯ ವತಿಯಿಂದ ಹಾಕಿಕೊಳ್ಳಲಾಗಿದೆ. ಈ ಮೂಲಕ ಗ್ರಾಮದಲ್ಲಿ ಆಹಾರದ ಸ್ವಾವಲಂಭನೆಯನ್ನು ಸಾಧಿಸುವ ಪ್ರಥಮ ಹಾದಿಯನ್ನು ಹಾಕಲಾಗಿದೆ.

  • ಗ್ರಾಮ ಸಮೃದ್ಧಿಯ ಹೆಸರಿನಲ್ಲಿ ಹಡೀಲು ಬಿದ್ದ ಕೃಷಿ ಭೂಮಿಯನ್ನು ಗ್ರಾಮದ ಸಮಸ್ತರೂ ಸೇರಿ ಪುನಶ್ಚೇನಗೊಳಿಸುವ ನಿಟ್ಟಿನಲ್ಲೂ ಕಾರ್ಯಕ್ರಮ ಇಡಲಾಗಿದೆ. ಅಂತರ್ಜಲ ಉಳಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆ ಜಾರಿಗೆ ತರುವ ಆಲೋಚನೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಟಿ.ವೆಂಕಟೇಶ್ವರ ನೂಜಿ ಅವರದ್ದು.
  • ಕಾರ್ಯಕ್ರಮ ವಿವರ:
    ಫೆ.೫ಕ್ಕೆ ತಂತ್ರಿಯವರ ಆಗಮನ, ವಾಸ್ತು ಹೋಮ, ವಾಸ್ತು ಪೂಜೆ, ಫೆ.೬ಕ್ಕೆ ಹೊರೆಕಾಣಿಕೆ ಸಮರ್ಪಣೆ, ಧ್ವಜಾರೋಹಣ ನಡೆಯಲಿದೆ. ಪ್ರತಿದಿನ ಸಂಜೆ ಧರ್ಮ ಸಭೆ ನಡೆಯಲಿದ್ದು ಸಂತರು, ಗಣ್ಯರು, ಧಾರ್ಮಿಕ ಉಪನ್ಯಾಸಕಾರರು ಭಾಗವಹಿಸಲಿದ್ದಾರೆ. ಫೆ.೧೦ರಂದು ಶ್ರೀ ದೇವರ ಪ್ರತಿಷ್ಠೆ, ಫೆ.೧೩ರಂದು ಬ್ರಹ್ಮಕಲಶ ಮತ್ತು ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
    ಫೆ.೧೫ರಂದು ಶಿಬರಿಕಲ್ಲು ಮಾಡ ಶ್ರೀ ಮಲರಾಯ ಮೂವರ್ ದೈವಂಗಳ ಸ್ಥಾನ ಪ್ರಧಾನಕ್ಕೆ ಗೊನೆ ಮುಹೂರ್ತ, ೧೯ರಂದು ತಂತ್ರಿಯವರ ಆಗಮನ, ವಾಸ್ತು ಪೂಜೆ, ೨೧ರಂದು ದೈವಗಳ ಸ್ಥಾನ ಪ್ರಧಾನ ಮತ್ತು ಧರ್ಮ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.೨೨ ಮತ್ತು ೨೩ರಂದು ದೈವಗಳ ನೇಮ ನಡೆಯಲಿದೆ.
  • ಬ್ರಹ್ಮಕಲಶ ನಿಮಿತ್ತ ಗಣಪತಿ ಹವನ, ವೇದ ಪಾರಾಯಣ, ಭಜನೆ, ರಾಮ ತಾರಕ ಹವನ, ಲಲಿತಾ ಸಹಸ್ರ ಹವನ, ವಿಷ್ಣು ಸಹಸ್ರ ಹವನಗಳು ನಡೆಯಲಿವೆ. ಒಟ್ಟು ೧೫ ದಿನಗಳ ಈ ಸಂಭ್ರಮದಲ್ಲಿ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ವಿಷ್ಣುಮೂರ್ತಿ ಕೆದಿಲಾಯ, ಬ್ರಹ್ಮಕಲಶ ಸಮಿತಿ ಕೋಶಾಧಿಕಾರಿ ಗೋವಿಂದರಾಜ್ ಪೆರುವಾಜೆ, ಸಂಘಟನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು, ಉಪಾಧ್ಯಕ್ಷರಾದ ಜಯಗೋವಿಂದ ಭಟ್ ಪೆರುವಾಜೆ, ರಾಮ ಭಟ್ ಪೆರುವಾಜೆ, ಸ್ವಾಗತ ಸಮಿತಿ ಅಧ್ಯಕ್ಷ ಜಿನ್ನಪ್ಪ ಗೌಡ, ಪದಾಧಿಕಾರಿಗಳಾದ ಉಮೇಶ ಹಡಿಲು, ಕೃಷ್ಣಪ್ಪ ಪೂಜಾರಿ ಪಾಂಡೇಲು, ರವೀಶ ಶೆಟ್ಟಿ ಪಿಲಿಂಜ, ದಯಾನಂದ ಪಾಂಡೇಲು, ಧನವತಿ, ಸಂದೀಪ್, ಪ್ರಶಾಂತ್ ಸಹಿತ ಊರ, ಪರವೂರ ನೂರಾರು ಮಂದಿ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

Be the first to comment on "ಗ್ರಾಮಾಭಿವೃದ್ಧಿಯೊಂದಿಗೆ ಬ್ರಹ್ಮಕಲಶೋತ್ಸವ: ಕುಂಡಡ್ಕದ ಯಶೋಗಾಥೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*