ಪ್ರಶ್ನೆ ಮಾಡುವ ದಿನದಿಂದ ವಿಜ್ಞಾನಿಯ ಉದಯ: ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿ ಇಸ್ರೋ ಪೂರ್ವಾಧ್ಯಕ್ಷ ಕಿರಣ್ ಕುಮಾರ್

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು
ಕೇಂದ್ರ ಸರಕಾರದ ನೀತಿ ಆಯೋಗದ ಅಟಲ್ ಇನ್ನೋವೇಷನ್ ಮಿಷನ್ ಅಡಿಯಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಆರಂಭಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಅಟಲ್ ಟಿಂಕರಿಂಗ್ ಲ್ಯಾಬ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪೂರ್ವಾಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಸೋಮವಾರ ಉದ್ಘಾಟಿಸಿದರು.
ಬಳಿಕ ಸೇರಿದ್ದ ಸುಮಾರು 60ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಬಿಆರ್‌ಎಂಪಿ ಸಿಬಿಎಸ್‌ಸಿ ಶಾಲೆ, ಪಾಣೆಮಂಗಳೂರು ಎಸ್.ಎಲ್.ಎನ್.ಪಿ, ಶಾರದಾ ಹೈಸ್ಕೂಲು, ಬಂಟ್ವಾಳ ಟೆಂಪಲ್ ಸ್ಕೂಲ್, ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಪ್ರೌಢಶಾಲೆ ನಾರ್ಶಾಮೈದಾನ, ಕಲ್ಲಡ್ಕ ಶ್ರೀರಾಮ ಹೈಸ್ಕೂಲು ಹೀಗೆ ತಾಲೂಕಿನ ನಾನಾ ಶಾಲೆಗಳ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರಿಸಿದ ಕಿರಣ್ ಕುಮಾರ್, ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಸಂದೇಹಗಳ ನಿವಾರಿಸಿದರು.
ಯಾವಾಗ ನಾವು ಪ್ರಶ್ನೆ ಮಾಡಲು ಆರಂಭಿಸುತ್ತೇವೋ ಆಗಿನಿಂದಲೇ ನಾವು ವಿಜ್ಞಾನಿಯಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಇದನ್ನು ನಿರಂತರವಾಗಿ ಮುಂದುವರಿಸಿದವರು ಭವಿಷ್ಯದಲ್ಲಿ ವಿಜ್ಞಾನಿಯಾಗುತ್ತಾರೆ. ಯಾವುದೇ ವಿಷಯದ ಕುರಿತು ಪ್ರಶ್ನಿಸುವ ಮನೋಭಾವವನ್ನುರೂಢಿಸಿಕೊಳ್ಳಬೇಕು, ಇದಕ್ಕಾಗಿ ಇಸ್ರೋ ಭುವನ್ ಎಂಬ ಆನ್‌ಲೈನ್ ಮಾಹಿತಿ ನೀಡುವ ಸೈಟ್ ಮಾಡಿದೆ. ಅಲ್ಲಿ ಬಾಹ್ಯಾಕಾಶದ ಕುರಿತು ಇರುವ ಸಂದೇಹಗಳಿಗೆ ಉತ್ತರ ದೊರಕುತ್ತದೆ ಎಂದರು. ಏಲಿಯನ್ ಗಳು ನಿಜಯಾಗಿಯೂ ಇದೆಯಾ, ಜ್ಯೋತಿಷ್ಯಶಾಸ್ತ್ರ ನಿಜವೇ ಎಂಬಿತ್ಯಾದಿ ಪ್ರಶ್ನೆಗಳೂ ವಿದ್ಯಾರ್ಥಿಗಳಿಂದ ಬಂತು. ಈ ಸಂದರ್ಭ ಉತ್ತರಿಸಿದ ಕಿರಣ್ ಕುಮಾರ್, ಏಲಿಯನ್ ಗಳು ಎಂಬುದಿಲ್ಲ. ಇದುವರೆಗೂ ಅವುಗಳ ಇರುವಿಕೆಯ ಬಗ್ಗೆ ಯಾವುದೇ ಸಂಶೋಧನೆಗಳು ಸಾಬೀತುಪಡಿಸಿಲ್ಲ. ಮನುಷ್ಯನಿಗೆ ಭೂಮಿ ಮೇಲೆ ಅಧಿಪತ್ಯ ಸ್ಥಾಪಿಸುವುದಷ್ಟೇ ಅಲ್ಲ, ಮಂಗಳಗ್ರಹದಲ್ಲಿರಬೇಕು ಎಂಬ ಆಸೆ ಇದೆ. ಅನ್ಯಗ್ರಹಗಳ ಮೇಲೆ ಅಧಿಪತ್ಯ ಸ್ಥಾಪನೆಗೂ ಮನುಷ್ಯ ಹೊರಡುತ್ತಿದ್ದಾನೆ ಎಂದರು. ಸಂಖ್ಯಾವಿಧಿ ಮೂಲಕ ಅಂದಾಜಿಸುವ ಪ್ರಕ್ರಿಯೆ ಜ್ಯೋತಿಷ್ಯಶಾಸ್ತ್ರದಲ್ಲಿದ್ದು, ಇದರಲ್ಲಿ ವೈಜ್ಞಾನಿಕ ಸಂಶೋಧನೆಗೆ ಕೆಲವು ತಾಳೆಯಾಗಬಹುದು ಎಂದರು.
ಈ ಸಂದರ್ಭ ಮಾತನಾಡಿದ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಹೊಸ ದಾಖಲೆಯನ್ನೇ ಬರೆದಿದೆ. ಚಂದ್ರಯಾನ ಮಾಡಿದಾಗ ಚಂದ್ರನ ಮೇಲೆ ನೀರಿನ ಕಣಗಳಿವೆ ಎಂಬುದನ್ನು ಪ್ರಪಂಚಕ್ಕೆ ಸಾರಿ ಹೇಳಿದ್ದ ಭಾರತ, ಮಂಗಳನ ಕಕ್ಷೆಗೆ ಮೊದಲ ಉಪಗ್ರಹ ಸೇರಿಸಿದ ಖ್ಯಾತಿಯನ್ನೂ ಪಡೆದಿದೆ. ತೊಂದರೆಗಳು ಜಾಸ್ತಿ, ಸಂಪನ್ಮೂಲಗಳು ಕಡಿಮೆ ಎಂಬ ಪ್ರತಿಕೂಲ ಸ್ಥಿತಿ ಇದ್ದರೂ ಇಚ್ಛಾಶಕ್ತಿ ಇದ್ದರೆ ಗುರಿ ಸಾಧನೆ ಸಾಧ್ಯ ಎಂಬುದನ್ನು ಭಾರತೀಯ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ ಎಂದರು. ಉಪಗ್ರಹಗಳಿಂದ ಜನರ ಹಿತ ಕಾಪಾಡುವಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಉಪಗ್ರಹ ನಿರ್ಮಿಸಿ ಬಳಕೆ ಮಾಡುವುದರಲ್ಲಿ ಭಾರತ ಅಗ್ರಗಣ್ಯನೆನಿಸಿದೆ ಎಂದು ಕಿರಣ್ ಕುಮಾರ್ ಹೇಳಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ವಿಶ್ವವೇ ಬೆರಗಾಗುವ ಮಾದರಿಯಲ್ಲಿ ಮುನ್ನಡೆಯುತ್ತಿದೆ. ಭಾರತದ ವೈಜ್ಞಾನಿಕ ಕ್ಷಮತೆ, ತಂತ್ರಜ್ಞಾನದ ಕ್ಷಮತೆ ಬೇರೆ ದೇಶಗಳ ತಂತ್ರಜ್ಞಾನದ   ವಿಸ್ತಾರಕ್ಕೂ ನೆರವಾಗುತ್ತಿದೆ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ ಕ್ಷೇತ್ರಕ್ಕೆ ಭಾರತ ಕೊಟ್ಟಿರುವ ವಿವಿಧ ಕೊಡುಗೆಗಳನ್ನು ಉಲ್ಲೇಖಿಸಿದರು. ಪ್ರಕೃತಿಯನ್ನು ವಿದೇಶಿ ಕನ್ನಡಕ ದಿಂದಲೇ ನೋಡಬೇಕೆನ್ನುವ ಕೆಲ ದೇಶಗಳ ನಡೆ ಆತಂಕಕಾರಿ ಎಂದ ಅವರು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸುವಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಯಶಸ್ವಿಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಶೈಕ್ಷಣಿಕ ಸಾಧನೆಯನ್ನು ಮಾಡುತ್ತಿರುವ ಬಂಟ್ವಾಳದಲ್ಲಿ ಈ ಕೇಂದ್ರ ಸ್ಥಾಪನೆಯಾಗುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರ ಸಂಪರ್ಕ ಪ್ರಮುಖ್ ಕೆ.ಎಸ್.ವೆಂಕಟೇಶ್, ಮುಂಬಯಿಯ ಲೆಕ್ಕಪರಿಶೋಧಕ ನಾರಾಯಣ ಶೆಟ್ಟಿ, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ರಾಧಾಕೃಷ್ಣ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಬೆಂಗಳೂರಿನ ಉದಯ್ ಬಿ.ಸಿ, ಸರ್ವೋತ್ತಮ ಬಾಳಿಗಾ ಉಪಸ್ಥಿತರಿದ್ದರು.
ಶೈಲಿನಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಕಿರಣ್ ಕುಮಾರ್ ಅವರು ಪ್ರಯೋಗಾಲಯವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ರಚಿಸಿದ ಮಾಡೆಲ್ ಗಳ ವೀಕ್ಷಣೆ ಮಾಡಿದರು. ಈ ಸಂದರ್ಭ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯರ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
6 ರಿಂದ 12 ವರ್ಷದೊಳಗಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕ್ಷೇತ್ರದ ಕುರಿತಾಗಿ ಕುತೂಹಲ, ಆಸಕ್ತಿಯನ್ನು ಹೆಚ್ಚಿಸಿ, ಅದನ್ನು ಉತ್ತೇಜಿಸುವ ವಿವಿಧ ಸಲಕರಣೆಗಳನ್ನು ಜೋಡಿಸಲಾಗಿದೆ. ಹೊಸ ಸಂಶೋಧನೆಗಳನ್ನು ಮಾಡುವ ಯುವ ವಿಜ್ಞಾನಿಗಳಿಗೆ ಅದಕ್ಕೆ ಪೂರಕವಾದ ಮಾಹಿತಿ, ಮಾರ್ಗದರ್ಶನವನ್ನು ನೀಡುವ, ವೈಜ್ಞಾನಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಪ್ರೇರೇಪಿಸುವ ವಿವಿಧ ಯಂತ್ರಗಳು, ಪುಸ್ತಕಗಳು  ಗಮನ ಸೆಳೆಯುತ್ತಿದೆ. ಸೈನ್ಸ್(ವಿಜ್ಞಾನ), ಟೆಕ್ನಾಲಜಿ(ತಂತ್ರಜ್ಞಾನ), ಇಂಜಿನಿಯರಿಂಗ್, ಮೆಥಮೆಟಿಕ್ಸ್(ಗಣಿತಶಾಸ್ತ್ರ) ವಿಚಾರ ಜೊತೆಯಾಗಿ ಸ್ಟೆಮ್ ಹೆಸರಿನಲ್ಲಿ ಮಕ್ಕಳಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುವ ವಿವಿಧ ವಿಜ್ಞಾನ ಮಾಡೆಲ್ಗಳು  ಕುತೂಹಲವನ್ನು ಹೆಚ್ಚಿಸುವಂತಿದೆ. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 2500 ಚದರ ಅಡಿ ವಿಸ್ತೀರ್ಣದ ಕೊಠಡಿಯಲ್ಲಿ ನಿರ್ಮಾಣಗೊಂಡಈ ಲ್ಯಾಬ್ ನಲ್ಲಿ ಪ್ರಸ್ತುತ 3ಡಿ ಪ್ರಿಂಟರ್, ರೋಬೋಟ್ಗಳು, 25 ಕ್ಕೂ ಅಧಿಕ ಸೆನ್ಸಾರ್ ಗಳು ಸೇರಿದಂತೆ ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳು, ಪ್ರಯೋಗ ಮಾಪನಗಳು, ವಸ್ತುಗಳನ್ನು ಇಲ್ಲಿ  ಜೋಡಿಸಿಡಲಾಗಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಪ್ರಶ್ನೆ ಮಾಡುವ ದಿನದಿಂದ ವಿಜ್ಞಾನಿಯ ಉದಯ: ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿ ಇಸ್ರೋ ಪೂರ್ವಾಧ್ಯಕ್ಷ ಕಿರಣ್ ಕುಮಾರ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*