ಮಾತಾಡೋವಾಗ ಜಾಗ್ರತೆ ಸ್ವಾಮಿ, ಮಕ್ಕಳೂ ನೋಡ್ತಾರೆ….!

  • ಹರೀಶ ಮಾಂಬಾಡಿ

https://bantwalnews.com

ಅಂಕಣ: ವಾಸ್ತವ

ನೀವು ನಾಟಕ, ಯಕ್ಷಗಾನ, ಅಥವಾ ಟಿ.ವಿ.ರಿಯಾಲಿಟ ಶೋ, ಧಾರಾವಾಹಿ ಇತ್ಯಾದಿಗಳನ್ನು ನೋಡುತ್ತೀರಾ?

ಜಾಹೀರಾತು

 

ಅದರಲ್ಲೂ ಪೌರಾಣಿಕ ನಾಟಕವೊ ಅಥವಾ ಯಕ್ಷಗಾನವನ್ನೋ ಸರಿಯಾಗಿ ಆಸ್ವಾದಿಸುವವರಾದರೆ ಈ ಪ್ರಶ್ನೆ.

ಜಾಹೀರಾತು

ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ (ವಿಶಾಲ ಅರ್ಥದಲ್ಲಿ ಹೇಳಿದ್ದು) ಅಥವಾ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ನೋಡುವುದೆಂದರೆ ಎಲ್ಲರಿಗೂ ಖುಷಿ. ಅದರಲ್ಲೂ ಪೌರಾಣಿಕ ಯಕ್ಷಗಾನ ಬಂತೆಂದರೆ ಈಗಲೂ ಸ್ವಲ್ಪ ಹೊತ್ತಾದರೂ, ಪುರುಸೊತ್ತು ಇಲ್ಲದಿದ್ದರರೂ ಹೋಗಿ ನೋಡುವ ವರ್ಗ ಇನ್ನೂ ಇದೆ.

ಈಗ ನಾನು ಕೇಳಿದ ಪ್ರಶ್ನೆಗೆ ಬಂದೆ. ನೀವು ನಾಟಕ, ಯಕ್ಷಗಾನ ಇತ್ಯಾದಿ ನೋಡುವ ಹುಚ್ಚು ಉಂಟು ಎಂದಾದರೆ ನೀವು ಹಲವು ಯಕ್ಷಗಾನಗಳನ್ನು ನೋಡಿರುತ್ತೀರಿ. ಸಣ್ಣ ಕಾರ್ಯಕ್ರಮವಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಟಕ ಅಥವಾ ಯಕ್ಷಗಾನ ಮಾಡಿಸಲೇಬೇಕು ಎಂಬಂತಾಗಿದೆ.

ಹೀಗಿರುವ ಸಂದರ್ಭವೇ ನಾನು ಯಕ್ಷಗಾನ ನೋಡಲು ಹೋಗಿದ್ದು.

ಜಾಹೀರಾತು

ಉತ್ತರಕುಮಾರ ಪ್ರಸಂಗದ ದೃಶ್ಯವದು. ಉತ್ತರ ಕುಮಾರ ಯುದ್ಧಕ್ಕೆ ತೆರಳುವಾಗ ನನಗೊಬ್ಬ ಸಾರಥಿ ಇದ್ದರೆ ಖಂಡಿತವಾಗಿಯೂ ಗೆಲ್ಲುತ್ತೇನೆ ಎಂದು ಜಂಭ ಕೊಚ್ಚುತ್ತಾನೆ. ಆಗ ಬೃಹನ್ನಳೆ ಸಾರಥಿಯಾಗಿ ಬರುತ್ತಾನೆ. ಅದು ಅರ್ಜುನ ಮಾರುವೇಷ. ಬಳಿಕ ಬೃಹನ್ನಳೆ ಅರ್ಜುನನಾಗಿ ಕೌರವರನ್ನು ಹಿಮ್ಮೆಟ್ಟಿಸುತ್ತಾನೆ ಎಂಬುದು ಕಥೆ.

ನಿಮ್ಮ ಕಲ್ಪನೆಯಲ್ಲಿ ಬೃಹನ್ನಳೆ ಅರ್ಥಾತ್ ಅರ್ಜುನ ಹೇಗಿರುತ್ತಾನೆ? ರೂಪಾಂತರ ಹೊಂದಿರುವ ವ್ಯಕ್ತಿಯಾದರೂ ಆತ ತೀರಾ ಕೆಳಮಟ್ಟಕ್ಕಿಳಿಯುವುದಿಲ್ಲ ಎಂಬುದಂತೂ ಸ್ಪಷ್ಟ. ಆದರೆ ಈ ಯಕ್ಷಗಾನದಲ್ಲಿ ಬೃಹನ್ನಳೆ ಪಾತ್ರ ವಹಿಸಿದ ವ್ಯಕ್ತಿ ಬೃಹನ್ನಳೆಯನ್ನು ಥೇಟ್ ಬಸ್ ನಿಲ್ದಾಣದಲ್ಲಿ ಅಥವಾ ಟೋಲ್ ಗೇಟ್ ನ ಬದಿಯಲ್ಲಿ ನಿಲ್ಲುವ ಹಿಜಡಾಗಳಂತೆ ಚಿತ್ರಿಸಿದ. ಪ್ರೇಕ್ಷಕರ ಚಪ್ಪಾಳೆಗಳು ಹೆಚ್ಚಾಗತೊಡಗಿದಂತೆ ಬಾಯಿಗೆ ಬಂದಂತೆ ಮಾತನಾಡತೊಡಗಿದ. ಹಾಗೆ ನೋಡಿದರೆ ಸಿಳ್ಳು, ಚಪ್ಪಾಳೆಗಳು ಪ್ರಬುದ್ಧ ಅರ್ಥ ಹೇಳಿದವನಿಗಿಂತಲೂ ಜಾಸ್ತಿ ಆತನಿಗೇ ಬಿತ್ತು. ಇದರಿಂದ ಉತ್ತೇಜಿತನಾದ ಆತ ಮತ್ತಷ್ಟು ಕೆಳಮಟ್ಟದ ಪ್ರದರ್ಶನ ನೀಡಲು ಆರಂಭಿಸಿದ.

ಇನ್ನೊಂದು ಪ್ರಸಂಗದಲ್ಲೂ ಹೀಗೇ ಆಯಿತು.

ಜಾಹೀರಾತು

ಅದು ನಾರದ ಮಹಾಮುನಿಗಳ ಪಾತ್ರ. ನಾರದ ಮುನಿ ಎಂದರೆ ಜ್ಞಾನಿಗಳು ಎಂದರ್ಥ. ಆದರೆ ಆ ಕಲಾವಿದ ನಾರದನನ್ನು ಓರ್ವ ಜೋಕರ್ ಎಂಬಂತೆ ಬಿಂಬಿಸಿದ. ಪಾಂಡವರಿಗೆ ಉಪದೇಶ ಮಾಡುವ ನಾರದರು ಹೇಗಿರಬೇಕು ಎಂಬ ಜ್ಞಾನ ಆತನಿಗೂ ಇದ್ದಿರಬಹುದು. ಆದರೆ ಪ್ರೇಕ್ಷಕರ ಚಪ್ಪಾಳೆ, ಫೊಟೋ ಕ್ಲಿಕ್ಕಿಸಿಕೊಳ್ಳುವ ತವಕದಲ್ಲಿ ತನ್ನ ಇರವನ್ನೇ ಕಲಾವಿದ ಮರೆತ.

ಇಂದು ಯಕ್ಷಗಾನ ಪ್ರದರ್ಶನಗಳು, ನಾಟಕ ಪ್ರದರ್ಶನಗಳು ತಮ್ಮ ವ್ಯಾಪ್ತಿ, ಬೌದ್ಧಿಕ ಸಂಪತ್ತನ್ನೂ ಆರ್ಥಿಕ ಸಂಪತ್ತನ್ನೂ ಹಿಗ್ಗಿಸಿಕೊಳ್ಳುತ್ತಿವೆ ಎಂದು ನಾನು ಭಾವಿಸುತ್ತಿದ್ದೆ. ಆದರೆ ಆರ್ಥಿಕವಾಗಿ ಕಲಾವಿದ ಎಷ್ಟು ಸಬಲನಾಗುತ್ತಿದ್ದಾನೋ ಅದೇ ಹೊತ್ತಿನಲ್ಲಿ ಬೌದ್ಧಿಕವಾಗಿ ಆತ ದಿವಾಳಿಯಾಗುತ್ತಿದ್ದಾನೋ ಎಂಬ ಸಂಶಯ ನನಗೆ ಮೂಡುವಂತೆ ಈ ಪ್ರದರ್ಶನಗಳು ಕಂಡವು.

ಇಂದು ಕೆಲವು ಹಾಸ್ಯ ಕಾರ್ಯಕ್ರಮಗಳನ್ನು ನೋಡಿ ಇದೇನು ಅವಸ್ಥೆ ಎಂದು ಹೇಳುವ ಮಟ್ಟಕ್ಕಿದೆ.

ಜಾಹೀರಾತು

ತಂದೆ, ತಾಯಿ ಇಲ್ಲದ ವೇಳೆ ಪ್ರಿಯಕರನನ್ನು ಕರೆಯುವುದು, ಅಥವಾ ಗಂಡ ಇಲ್ಲದ ವೇಳೆ ಪ್ರಿಯತಮನನ್ನು ಕರೆಯುವ ದೃಶ್ಯವನ್ನು ಹಾಸ್ಯ ಎಂದು ಮಾಡುತ್ತಾರೆ. ಇದು ಬನ್ನಿ ನಕ್ಕುನಗಿಸೋಣ ಎಂಬ ಶೀರ್ಷಿಕೆಯೊಂದಿಗೆ ಮಾಡುವ ಕಲಾವಿದರು ಅದರಲ್ಲಿ ಅಶ್ಲೀಲತೆ, ದ್ವಂದ್ವಾರ್ಥಗಳನ್ನು ಅಳವಡಿಸುತ್ತಾರೆ. ಇಂದು ಅಶ್ಲೀಲತೆ, ದ್ವಂದ್ವಾರ್ಥಗಳು ಇಲ್ಲದ ಹಾಸ್ಯವೇ ಸೃಷ್ಟಿಯಾಗುವುದಿಲ್ಲವೇನೋ ಎಂಬಂತೆ ಭಾಸವಾಗುತ್ತವೆ.

ಟಿ.ವಿ. ಧಾರಾವಾಹಿಗಳನ್ನು ಒಂದಿಡೀ ದಿನ ನೋಡಿ. ಟಿ.ವಿ. ಕಾಮಿಡಿ ಶೋಗಳನ್ನು (ಹೌದಾ) ನೋಡಿ. ಅಲ್ಲೂ ಹಾಸ್ಯ ಮೂರನೇ ದರ್ಜೆಗೆ ಇಳಿದಿದೆಯಾ ಎಂದು ಭಾಸವಾಗುತ್ತದೆ. ಕಾಮಿಡಿ ಶೋ ನಡೆಸುವ ಕಲಾವಿದರು ಉತ್ತಮ ಕಲಾವಿದರು. ಆದರೆ ಅವರ ಬಾಯಿಂದ ಬರುವ ಮಾತುಗಳು ಯಾವ ಸ್ಟಾಂಡರ್ಡ್ ನಲ್ಲೂ ಇರುವುದಿಲ್ಲ.

ಹಾಸ್ಯ ಕಲಾವಿದರು ಯಾವುದಾದರೂ ಹಾಸ್ಯದ ಪ್ರಸಂಗ ಹೇಳಿದರೆ, ಅಥವಾ ಅಭಿನಯಿಸಿದರೆ, ಹಿಂದಿನಿಂದ ನಗುವ ಶಬ್ದ ಹಾಕುವ ಪರಿಪಾಠ ಇಂದು ಹೆಚ್ಚಿನ ಟಿ.ವಿ.ಶೋಗಳಲ್ಲಿ ಬಂದಿದೆ.

ಜಾಹೀರಾತು

ದಕ್ಷಿಣ ಕನ್ನಡದಲ್ಲೂ ಈಗ ಉತ್ಸವ, ಜಾತ್ರಾ ಕಾರ್ಯಕ್ರಮಗಳಲ್ಲಿ ಹಾಸ್ಯ ಕಾರ್ಯಕ್ರಮವನ್ನು ಮಾಡುತ್ತಾರೆ. ಇಲ್ಲಿಯ ಹಾಸ್ಯವೂ ಎಷ್ಟು ಸದಭಿರುಚಿಯದ್ದು ಇರುತ್ತದೆ ಅಥವಾ ಸಮಾಜವನ್ನು ಯಾವ ದಾರಿಗೆ ಕೊಂಡೊಯ್ಯುತ್ತದೆ ಎಂಬುದು ವಿಶ್ಲೇಷಣೆಗೆ ಅರ್ಹವಾದ ವಿಚಾರ.

ಟಿ.ವಿ.ಯಲ್ಲಿ ಬರುವ ಜೋಕ್ ಗಳೇ ಮತ್ತೆ ಮನೆಯಲ್ಲಿ ರಿಪೀಟ್ ಆಗುತ್ತದೆ. ಅಲ್ಲಿ ಬಳಸುವ ಶಬ್ದಗಳೇ ಮಕ್ಕಳ ಬಾಯಲ್ಲಿ ನಲಿದಾಡುತ್ತದೆ. ಯಕ್ಷಗಾನದಲ್ಲಿ ಕಲಾವಿದ ಅಭಿನಯಿಸುವಾಗ ಮಾತನಾಡುವ ಶಬ್ದಗಳು ಅವನ ಸ್ವಂತ ಬದುಕಿನ ವಿಚಾರಗಳದ್ದಿರಬಾರದು. ಆತ ಪಾತ್ರದಲ್ಲಿ ಲೀನವಾಗಿಬಿಡಬೇಕು. ಆದರೆ ಈಗ ಎಲ್ಲೆಲ್ಲಿ ಲೀನವಾಗುತ್ತಾರೋ ಗೊತ್ತಿಲ್ಲ.

ಇಂದು ಕಲೆ ಸಮೃದ್ಧವಾಗಿ ಬೆಳೆದಿದೆ. ಆದರೆ ಅದರ ಮೌಲ್ಯ ಎಷ್ಟರ ಮಟ್ಟಿಗೆ ಉಳಿದಿದೆಯೋ ಗೊತ್ತಿಲ್ಲ. ಅಥವಾ ನಾನು ಮೇಲೆ ಬರೆದದ್ದು ಸಂಪೂರ್ಣ ತಪ್ಪು, ಈಗ ಮಾಡುತ್ತಿರುವುದೇ ಸರಿ, ನಿಮಗೆ ಅದರಲ್ಲಿರುವ ಉತ್ತಮ ಅಂಶಗಳನ್ನು ಹುಡುಕುವುದೇ ಗೊತ್ತಿಲ್ಲ ಎಂದು ಹೇಳುವ ವರ್ಗವೂ ಇರಬಹುದು. ಏಕೆಂದರೆ ನಾನು ಮೇಲೆ ಪ್ರಸ್ತಾಪಿಸಿದ ಹಾಸ್ಯ ಕಾರ್ಯಕ್ರಮಗಳು ಜನಪ್ರಿಯವಾಗಿವೆ. ಹೀಗಾಗಿ ಇದು ಸರಿಯೇ ಎಂದು ಪ್ರಶ್ನಿಸಿದರೆ ನಾನು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂಬಂತೆ ಎನ್ನಬಹುದು.

ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಕಳೆದ ನಾಲ್ಕೈದು ವರ್ಷಗಳಿಂದ ರಂಗವೇದಿಕೆಗಳಲ್ಲಿ ನಡೆಯುವ ನಾಟಕ, ಹಾಸ್ಯ ಶೋ, ಯಕ್ಷಗಾನ ನೋಡಲು ಜನರು ಬರುತ್ತಾರೆ. ಅದರಲ್ಲೂ ಮಕ್ಕಳು ಆಸಕ್ತಿಯಿಂದ ಬಂದು ನೋಡುತ್ತಾರೆ. ಈ ಮಕ್ಕಳಿಗೆ ಸಂಸ್ಕಾರಯುತವಾದ ವಿಚಾರಗಳು, ಸದಭಿರುಚಿಯ ಹಾಸ್ಯ ವನ್ನು ಕಲಾವಿದರು ಒದಗಿಸಿದರೆ ಅದೇ ಮುಂದಿನ ಭವ್ಯ  ಹಾಗೂ ಸುಸಂಸ್ಕೃತ ಭಾರತ ಕಟ್ಟಲು ನಾಂದಿಯಾಗುತ್ತದೆ

ಇಂದು ಯಕ್ಷಗಾನ, ನಾಟಕ, ಟಿ.ವಿ.ಶೋ, ಹಾಸ್ಯ ಪ್ರದರ್ಶನಗಳಲ್ಲಿ ಹೊರಹೊಮ್ಮುವ ಮಾತುಗಳನ್ನು ಆಲಿಸುವ ಮುಂದಿನ ಪೀಳಿಗೆ ಅದನ್ನೇ ಪುನರಾವರ್ತಿಸುತ್ತವೆ. ಒಳ್ಳೆಯ ಮಾತು ಕೊಟ್ಟರೆ, ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಅಶ್ಲೀಲತೆ ಎಂಬುದಕ್ಕೆ ಹೊಸ ಅರ್ಥವನ್ನು ಹುಡುಕಬೇಕಾಗುತ್ತದೆ.

ಏನಂತೀರಿ?                   

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಮಾತಾಡೋವಾಗ ಜಾಗ್ರತೆ ಸ್ವಾಮಿ, ಮಕ್ಕಳೂ ನೋಡ್ತಾರೆ….!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*