ಚೆಂಡೆ, ಮದ್ದಳೆ ನುಡಿಸಲು ಕಲಿಸುವ ಮಾಂಬಾಡಿ ಸುಬ್ರಹ್ಮಣ್ಯ ಭಟ್

 

  • ಕೃಷ್ಣಪ್ರಕಾಶ ಉಳಿತ್ತಾಯ

ನಾನು ಹತ್ತು ವರುಷದವನಿದ್ದಾಗಿನ ನನ್ನ ತಂದೆಯವರಾದ ವೆಂಕಟೇಶ ಉಳಿತ್ತಾಯರ ಈ ಮಾತು ನನ್ನನ್ನು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಕಡೆಗೆ ಸೆಳೆಯಿತು: “ಮಾಂಬಾಡಿಯವರ ಜತೆ ಚೆಂಡೆ ಜುಗಲ್ಬಂದಿ ಮಾಡುವುದು ಅಷ್ಟೊಂದು ಸುಲಭವಲ್ಲ , ಅವರಲ್ಲಿ ಇನ್ನೂರು ಪುಟಗಳ ಐವತ್ತರಿಂದ ಅರವತ್ತು ಪುಸ್ತಕಗಳಲ್ಲಿ ಬರೆದಿಟ್ಟ ಚೆಂಡೆಯ ಸಾಹಿತ್ಯ ಇದೆ. ತಲೆಯಲ್ಲಿ ಅಸಂಖ್ಯ”. ಇದೊಂದು ಹೊಸ ಬಗೆಯ ಬೆರಗಗಿನ ಚಿತ್ರವನ್ನು ನನ್ನಲ್ಲಿ ಹುಟ್ಟಿಸಿತ್ತು. ಅದಾದನಂತರ ಅವರನ್ನು ನಾನು ನೋಡಿದುದು ನಮ್ಮೂರು ಆರ್ಲಪದವು ವಿನಲ್ಲಿ. ಕದ್ರಿ ಮೇಳದ ರಂಗಸ್ಥಳದಲ್ಲಿ , ಅವರು ಚೆಂಡೆ ನುಡಿಸುತ್ತಿದ್ದಾಗ. ಯಾವುದೋ ತುಳು ಪ್ರಸಂಗಕ್ಕೆ ಮಿದುವಾಗಿ ಚೆಂಡೆ ನುಡಿಸುತ್ತಿದ್ದ ಚಿತ್ರ ನನ್ನ ಮನಃ ಪಟಲದಲ್ಲಿ ಅಚ್ಚೊತ್ತಿದೆ. ಮತ್ತಿನ ಮುಖಾಮುಖಿ ಪಾವಂಜೆ ಕ್ಷೇತ್ರದಲ್ಲಿ ನಡೆದ ತಾಳಮದ್ದಳೆಯೊಂದರಲ್ಲಿ. ಮಾಂಬಾಡಿ ಗುರುಗಳ ಚೆಂಡೆ, ಪದ್ಯಾಣ ಜಯರಾಮ ಭಟ್ಟರ ಭಾಗವತಿಕೆ ಹಾಗು ನಾನು ಮದ್ದಳೆಗೆ. ಶರಸೇತು ಪ್ರಸಂಗ. ಅಂದವರ “ಎಲೆ ಮಾನವ ನೀ ಸಲೆಕೈ ಚಳಕದಿ ಬಲಿದಿಹ ಸೇತುವದೇನಾಯ್ತು…” ಈ ಪದಕ್ಕೆ ವ್ಯಂಗ್ಯ ಭಾವವನ್ನು ಪ್ರತೀಕಗೊಳಿಸುವ ಚೆಂಡೆ ವಾದನ ಅನನ್ಯವಾಗಿತ್ತು. ಅಂದವರು ನನಗೆ ಚೆಂಡೆಯ ಪೀಠಿಕೆಯ ನುಡಿಸುವಿಕೆಯ ಭಾಗದಲ್ಲಿದ್ದ ಒಂದೆರಡು ಸಮಸ್ಯೆಗೆ ಉತ್ತರವನ್ನು ಹೇಳಿದ್ದಾರೆ. ಆ ಪ್ರತ್ಯಕ್ಷ ಕಾರಣದಿಂದಲೂ ನಾನು ಅವರನ್ನು ಗುರುವೆಂದು ಕರೆಯುವುದು. ಪರೋಕ್ಷ ಕಾರಣ ಅನೇಕವಿದೆ. ಆ ಹೊತ್ತಿಗಾಗಲೇ ಯಕ್ಷಗಾನ (ಆಟ-ಕೂಟ) ದ “ಮುಂಚೂಣಿ” ಕಾರ್ಯಕ್ರಮಗಳಿಂದ ತಾವಾಗಿಯೇ ದೂರಸರಿದಾಗಿತ್ತು. ಹಿಮ್ಮೇಳ ಅಧ್ಯಾಪನದತ್ತ ತಮ್ಮೊಲವನ್ನು ತೊಡಗಿಸಿಕೊಂಡಾಗಿತ್ತು. ಇದು ಯಕ್ಷಗಾನಕ್ಕೆ ನಷ್ಟವೂ (ಸೃಜನಶೀಲ ಚೆಂಡೆ ಮದ್ದಳೆಯ ಸೌಂದರ್ಯಾಸ್ವಾದನೆಯ ಸಿಗದಿರುವಿಕೆ) ಹೌದು ಮತ್ತು ಲಾಭವೂ ( ಸಮರ್ಥ ಕಲಾವಿದರ ರೂಪಿಸುವಿಕೆ) ಹೌದು.

ಜಾಹೀರಾತು

ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರದು ಶಾಸ್ತ್ರೀಯ ಕಲಾ ಮನಸ್ಸು. ಅವರ ಚೆಂಡೆ ಮದ್ದಳೆ ಪ್ರಸ್ತುತಿಯಲ್ಲಿ ಇದು ಸ್ಫುಟವಾಗಿ ಕಾಣುತ್ತದೆ. ಯಾವೊಂದು ನುಡಿತಗಳೂ ಕೃತಕವಾಗಿ ಕಾಣದೆ ;ಬದಲಾಗಿ ಆ ನುಡಿಸುವಿಕೆಯ ಹಿಂದೆ ಆಳವಾದ ಚಿಂತನೆ ಇದ್ದಂತೆ ತೋರುತ್ತದೆ. ಒಬ್ಬ ಗಂಭೀರ ಚಿಂತಕ-ಕಲಾವಿದನಿಗೆ ಕೇವಲ ಪ್ರೇಕ್ಷಕರನ್ನೇ ದೃಷ್ಟಿಯಲ್ಲಿರಿಸಿ “ಪ್ರದರ್ಶನ ” “ಕೊಡುವುದು” ಧೀರ್ಘ ಸಮಯ ಸಾಗದು. ಬದಲಾಗಿ ಅಙತಹಾ ಕಲಾವಿದ ಸಹಜವಾಗಿ ಕಲೆಗೆ ಸ್ಪಂದಿಸುತ್ತಾ ಅಭಿವ್ಯಕ್ತಿಸುತ್ತಾ ಸಾಗುತ್ತಾನೆ. ಇದು ಮಾಂಬಾಡಿಯವರಲ್ಲಿ ನಾವು ಕಾಣಬಹುದು. ಮತ್ತಿದೇ ಕಾರಣದಿಂದ
ದಾಗಿಯೋ ಏನೋ ಅವರು ರಂಗದಿಂದ ನಿಷ್ಕ್ರಮಿಸಿದರು.

ಗಾನಕ್ಕೆ ತೊಡಕಾಗದಂತೆ ಚೆಂಡೆವಾದನ ಕ್ರಮ ಮಾಂಬಾಡಿಯವರದ್ದು. ವಿಶಿಷ್ಟವಾದ ಚೆಂಡೆಯ ಕೊಲುಗಳ ಹಿಡಿಯುವಿಕೆ ಮತ್ತು ಬಳಸಿಕೊಳ್ಳುವಿಕೆ ಇವರದ್ದು. ಕೋಲುಗಳನ್ನು ಸಡಿಲವಾಗಿ ಕೋಲಿನ ಮಧ್ಯಭಾಗದಿಂದ ಸ್ವಲ್ಪವೇ ಕೆಳಗೆ ಹಿಡಿದು ಚೆಂಡೆಯ ಅಂಚಿಗೆ (ಹೆಚ್ಚಾಗಿ) ಬೇಕಾದಾಗ ಔಚಿತ್ಯದಿಂದ ಚೆಂಡೆಯ ಮಧ್ಯಭಾಗಕ್ಕೆ ನುಡಿಸುವುದು ಇವರ ಕ್ರಮ. ತಾಳ್ಮೆ ಎಂಬುದು ಇವರ ನುಡಿಸಾಣಿಕೆಯ ಕೇಂದ್ರ ಭಾಗವಾಗಿದೆ. ನುಡಿಸುತ್ತಿರುವಾಗ ಗಾನದ ಭಾವಕ್ಕೆ ಹೊಂದುವ ಜಾಗವನ್ನು ಕಾಯುತ್ತಾ ಅಂತಹಾ ರಸೋತ್ಕರ್ಷದ ಸಮಯ ಕಾದು ತನ್ನಿರವನ್ನು ತೋರುವುದಿದೆಯಲ್ಲಾ ಇದೆಲ್ಲಾ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಂತಹಾ ಪ್ರಬುದ್ಧ ಕಲಾವಿದರಿಗೆ ಮಾತ್ರ ಸಾಧ್ಯ. ಇದೆಲ್ಲಾ ಕಲೆಯನ್ನು ಸೂಕ್ಷ್ಮವಾಗಿ ನೋಡುವುದರಿಂದ ಸಾಧ್ಯವಾಗುತ್ತದೆ.
ಸೌಂದರ್ಯಶಾಸ್ತ್ರ ಹೇಳುವ “ಔಚಿತ್ಯಪ್ರಜ್ಞೆ ” ಎಂಬುದು ಇವರಲ್ಲಿ ಆತ್ಮಗತವಾಗಿದೆ. ಇವರಲ್ಲಿದ್ದ ತಾಳ್ಮೆ ಇವರನ್ನೊಬ್ಬ “ಗುರು” ವಾಗಿಯೂ ಯಶಸ್ವೀ ಹಿಮ್ಮೇಳ ಶಿಕ್ಷಕನನ್ನಾಗಿಯೂ ರೂಪಿಸಿದೆ ಎನ್ನಬಹುದು. ಆದರೆ ಗುರು ಮಾಂಬಾಡಿಯವರು ರಂಗದಲ್ಲಿ ಸಕ್ರಿಯರಾಗದೇ ಇರುವುದು ಉದಯೋನ್ಮುಖ (ಹಿಮ್ಮೇಳ) ಕಲಾವಿದರನೇಕರಿಗೆ
ಬಹುಮುಖ್ಯವಾಗಿ ಪ್ರಚಲಿತದಲ್ಲಿ ಇರಲೇಬೇಕಾದ ಅನೇಕ ಅನುಸರಣೀಯ ದಾರಿಯಲ್ಲಿ ಮಾಂಬಾಡಿ ದಾರಿ ಇಲ್ಲದೇ ಇರುವುದು ದೊಡ್ಡ ನಷ್ಟ.

ಜಾಹೀರಾತು

ರಸ-ಧ್ವನಿ-ಔಚಿತ್ಯ ಇವು ಯಾವುದೇ ಕಲೆಯನ್ನು ನಿಕಷಕ್ಕೆ ಒಡ್ಡುವಾಗ ಗಣನೆಗೆ ಬರುವ ವಿಚಾರಗಳು. ಕಾವ್ಯವನ್ನು ಚಿಂತಿಸುವಾಗ ಇವುಗಳೆಲ್ಲಾ ಮನಸ್ಸಿಗೆ ಬರುತ್ತವೆ. ಸೌಂದರ್ಯ ಮೀಮಾಂಸೆ ರಸವನ್ನು ಕಾವ್ಯದ ಆತ್ಮ ಎಂದರೆ ; “ಧ್ವನಿ”- ಕಾವ್ಯದ ಶರೀರ ಹೇಗೆ ರಸವನ್ನು ಚಿಮ್ಮಿಸುತ್ತದೆಯೋ ಅಂತಹಾ ಒಂದು ರೀತಿಗೆ ಹೋಲಿಸಿದೆ. ಹೀಗೆ ಆತ್ಮ (ರಸ) ಮತ್ತು ಶರೀರ (ಧ್ವನಿ) ಇವುಗಳ ಸಮುಚಿತ ಸಂಬಂಧಕ್ಕೆ ಔಚಿತ್ಯ ಎನ್ನುತ್ತಾರೆ. ಇವುಗಳ ಕುರಿತು ಸೌಂದರ್ಯ ಮೀಮಾಂಸಕರಲ್ಲಿ ವಾದ ಇನ್ನೂ ಇದ್ದರೂ ಪ್ರಕೃತ ಮಾಂಬಾಡಿ ಗುರುಗಳಲ್ಲಿರುವ ಔಚಿತ್ಯಪ್ರಜ್ಞೆ ನಮಗಿಲ್ಲಿ ಮುಖ್ಯವಾಗುತ್ತದೆ. ಬರಿಯ ಕಾವ್ಯಕ್ಕೆ ರಸ-ಧ್ವನಿ-ಔಚಿತ್ಯ ಇವಿಷ್ಟಿದ್ದರೆ ಸಾಕೆ? ಕಾವ್ಯವನ್ನು ಸಂಗೀತವನ್ನಾಗಿಸುವ ಗಾಯನದಲ್ಲಿ, ಸಂಗೀತವನ್ನು ಹೃದಯಂಗಮವನ್ನಾಗಿಸುವ ವಾದನದಲ್ಲೂ ಇದಿರಬೇಕಲ್ಲಾ . ಈ ವಿಚಾರದಲ್ಲಿ ವಿದ್ವಾಂಸರಾದ. ರವೀಂದ್ರ ಅತ್ತೂರರು ಹೇಳುತ್ತಾರೆ ” ಪ್ರಯೋಗತ್ವಮನಾಪನ್ನೇ ಕಾವ್ಯೇ ನಾಸ್ವಾದಸಂಭವಃ ”
– ಭಟ್ಟತೌತಃ
” ನಾಟ್ಯರೂಪವನ್ನು ತಾಳಿದ ಹೊರತು ಕಾವ್ಯದಲ್ಲಿ ಆಸ್ವಾದವುಮಟಾಗದು ” .
ಹಾಗು
ಲಾಕ್ಷಣಗ್ರಂಥ ಕಾವ್ಯಕೌತುಕಾದರ್ಶದಲ್ಲಿ ಉಲ್ಲೇಖಿತ ” ನಾಟ್ಯಂ ಗೀತಾದಿರಂಜಿತಮ್ ” ಎಂಬ ಪ್ರಮಾಣದಂತೆ ಹೃದಯಂಗಮವಾಗಿಸುವಲ್ಲಿ ರೂಪಕಕ್ಕೆ ಸಂಗೀತವೂ , ಸಂಗೀತಕ್ಕೆ ರೂಪಕವೂ ಅನ್ಯೋನ್ಯಾಶ್ರಯ ”
ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಈ ತ್ರಿಪುಟಿಯ (ರಸ. ಧ್ವನಿ ಔಚಿತ್ಯ) ಸಂಮಿಶ್ರಣದಂತೆ ತೋರುತ್ತಾರೆ. ಅದರಲ್ಲೂ ಅವರಲ್ಲಿರುವ ಔಚಿತ್ಯಪ್ರಜ್ಞೆಯ ತೂಕ ಹಿರಿದಾದುದು.

“ಭಿನ್ನಂ ದ್ವಿಧಾ ಸ್ವಭಾವೋಕ್ತಿರ್ವಕ್ರೋಕ್ತಿಶ್ತೇತಿ ವಾಙ್ಮಯಂ” ಇದು ದಂಡಿಯ ಕಾವ್ಯಾದರ್ಶದಲ್ಲಿ ಬರುವ ಮಾತು . ಇದನ್ನು ತೀನಂಶ್ರೀ ಯವರು ಹೀಗೆ ಹೇಳಿದ್ದಾರೆ “ವಾಙ್ಮಯವು ಸ್ವಭಾವೋಕ್ತಿ ಮತ್ತು ವಕ್ರೋಕ್ತಿ ಎಂದು ಎರಡು ಬಗೆ” . ತೀನಂಶ್ರೀ ಯವರು ಭಾಮಹನ ಮಂಡನೆಯ ಬಗ್ಗೆ ಹೇಳುತ್ತಾ ವಕ್ರೋಕ್ತಿ ಇಲ್ಲದೆ ಅಲಂಕಾರ ಇಲ್ಲ ಎನ್ನುತ್ತಾರೆ. ಇಂತಹಾ ಸ್ವಭಾವೋಕ್ತಿ (ಸಹಜ ಸರಳ ನೇರ ನುಡಿಸುವಿಕೆ )ಮತ್ತು ವಕ್ರೋಕ್ತಿ ( ಅಸಹಜವಾದರೂ ಅಲಂಕಾರಿಕ ಪಾಟಗಳಿಂದ, ವಿಷಮ ,ವಕ್ರ ಅಥವಾ indirect ಉದಾಹರಣೆಗೆ ಗ್ರ್sssssss, ಕಣಕಣಕಣ ಎಂಬ ಚೆಂಡೆಯ ಮಣಿಸ್ವರ, ಮುಚ್ಚಿಗೆಯ ಮೇಲೆ ತಾಡನೆಗೆ , ಮದ್ದಳೆಯಲ್ಲಾದರೆ ಬರಿಯ ಎಡ ಭಾಗದಲ್ಲಿ ಉಡಿಕೆಯಂತೆ ಗುಂಕಾರ, ಗ್ ಕಾರಗಳು ಸೇರಿರುವ ನುಡಿಸುವಿಕೆ ಇತ್ಯಾದಿ) ಗಳ ಇರವನ್ನು ಅವನದ್ಧ ವಾದ್ಯಗಳ ಪಾಠ ಸಮೂಹಗಳಲ್ಲೂ ಮನೋಧರ್ಮಿಯ ವಾದನಗಳಲ್ಲು ಕಾಣಬಹುದು. ಆದರೆ ಇವುಗಳ ನೆಲೆ ಔಚಿತ್ಯತೆಯೆಂಬ ಪಂಚಾಂಗದಲ್ಲಿ ಪ್ರತಿಷ್ಠಿತವಾಗಿದ್ದರೆ ಕಲೆಗೆ ಅದು ಭೂಷಣ. ಹಿರಿಯ ಮದ್ದಳೆಗಾರರಾದ ಮತ್ತು ಮಾಂಬಾಡಿಯವರ ಜತೆ ವ್ಯವಸಾಯ ಮಾಡಿದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರ ಅಭಿಪ್ರಾಯದಂತೆ ಗುರು ಗೋಪಾಲಕೃಷ್ಣ ಕುರೂಪ್, ಗುರು ಹರಿನಾರಾಯಣ ಬೈಪಾಡಿತ್ತಾಯರು, ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು, ಗುರು ಮುಂಡ್ರುಪ್ಪಾಡಿ ಶ್ರೀಧರ ರಾಯರಂತಹಾ ಹಿರಿಯ ಮದ್ದಳೆಗಾರರ ನುಡಿಸಾಣಿಕೆ ಅತ್ಯಂತ ನೇರ ಮತ್ತು ಸರಳ. ಸ್ವಭಾವೋಕ್ತಿಯಂತೆ. ಇವರ ಪ್ರಸ್ತುತಿಯ ಸಾರ ಸೌಂದರ್ಯದ ಅರಿವಾಗುವುದು ನಮ್ಮ ಕಿವಿಯನ್ನು ಸೂಕ್ಷ್ಮವಾಗಿಸಿ ಆಳಕ್ಕಿಳಿದು ಕೇಳುವಾಗ. ಆಗ ಇವರೆಲ್ಲಾ ನುಡಿಸುವ ಚೆಂಡೆ ಮದ್ದಳೆಯ ಪಾಟಾಕ್ಷರಗಳು ಕೇವಲ ಪಾಟಕ್ಷರವಾಗಿರದೆ ಕಾವ್ಯಾತ್ಮಕವಾಗಿಯಲ್ಲ ಸಂಗೀತದಂತೆ ಕೇಳತೊಡಗುತ್ತವೆ. ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ನುಡಿತಗಳು ಸ್ಪಷ್ಟ. ಇದಕ್ಕೆ ಕಾರಣ ನುಡಿಸಾಣಿಕೆಯ ನಡು ನಡುವೆ ತುಂಬಿ ನಿಂತಿರುವ ಮೌನವೆಂಬ (pause) ಮಹಾಪಾಟಾಕ್ಷರ. ಅಮವಾಸ್ಯೆಯ ಆಕಾಶದಲ್ಲಿ ನಕ್ಷತ್ರಗಳು ಉಜ್ವಲವಾಗಿ ಕಾಣುವಂತೆ, ಮೌನವನ್ನು ಮೆಚ್ಚಿಕೊಂಡ ನುಡಿಸಾಣಿಕೆ ಹೃದಯದ ಭಾಷೆಯಾಗಿ ರಸಜ್ಞರ ಹೃದಯ ತಟ್ಟುತ್ತದೆ.

ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ತಮ್ಮನ್ನು ತಾವು ಹಿಮ್ಮೇಳ (ಚೆಂಡೆ-ಮದ್ದಳೆ-ಭಾಗವತಿಕೆ)ಅಧ್ಯಾಪನ ಕ್ಷೇತ್ರದಲ್ಲಿ ತೊಡಗಿಸಿದುದರಿಂದ ಯಕ್ಷಗಾನ ಕ್ಷೇತ್ರಕ್ಕೆ ಬಹು ದೊಡ್ಡ ಲಾಭವಾಗಿದೆ. ಅಸಂಖ್ಯ ಶಿಷ್ಯರನ್ನು ರೂಪಿಸಿದ್ದುದಲ್ಲದೇ ಕಲೆಯನ್ನು ಮುಂದಿನ ತಲೆಮಾರಿಗೆ ದಾಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶ್ರೀ ಹರೀಶ ಬೊಳಂತಿಮೊಗರು ಅವರೆನ್ನುವಂತೆ ಪಾಠ ಮಾಡುವಾಗ ಇವರಲ್ಲಿ ಹಾಸ್ಯ ಭಾವ ಜಾಗ್ರತವಾಗಿರುತ್ತಾ ಬೇಕಾದಲ್ಲಿ ವಿದ್ಯಾರ್ಥಿಗಳಿಗೆ ತಮಾಷೆಯಿಂದ ಮಾತಿನಲ್ಲಿ ತಿವಿಯುತ್ತಾ ಚಿತ್ತಾಪಹಾರಕರಾಗಿ ಕಾಣುತ್ತಾರೆ. ಹರೀಶರು ಇವರು ಆದಿ ತಾಳ ಕಲಿಸುವ ಬಗ್ಗೆಯನ್ನು ಹೇಳುತ್ತಾರೆ ” ಧಾದಿತತ್ತಾ ದಿಂದತ್ತಾ ಕಿಟತಕದಿಂತದಿಂತ ತತ್ತಾಂ ಇದ್ದರೆ ಮಾಂಬಾಡಿ ಗುರುಗಳು ಕೆಲವು ಶಿಷ್ಯರಿಗೆ ಹೇಳಿಕೊಡುವಾಗ
ಅಣ್ಣಾಅಣ್ಣಾ ಸಣ್ಣಣ್ಣಾ ದೊಡ್ಡಣ್ಣಾ ದೊಡ್ಡಣ್ಣಾ ಎಂಬ ವ್ಯಂಗ್ಯೋಕ್ತಿಯ ಮೂಲಕ ಲಯಸಿದ್ದಿಯನ್ನು ಕಲಿಯುವವನ ತಲೆಯಲ್ಲಿ ಸ್ಥಾಯಿಯಾಗಿಸುತ್ತಾರೆ . ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಪ್ರಾತಃಸ್ಮರಣೀಯರಾದ ದಿ.ಮಾಂಬಾಡಿ ನಾರಾಯಣ ಭಟ್ಟರ ಮಗನಾಗಿ ಶಾಸ್ತ್ರೀಯ ಮನಃಸ್ಥಿತಿಯಲ್ಲೆ ಯಕ್ಷಗಾನವನ್ನು ನೋಡಿ,ಕೇಳಿ,ಕಲಿತು ಭಾಗವಹಿಸಿ ತನ್ನದಾಗಿಸಿಕೊಂಡುದುದರಿಂದ ಇಂದು ಇವರು ಯಕ್ಷಗಾನಕ್ಕೆ ಬಲು ದೊಡ್ಡ ಸೊತ್ತಾಗಿ ಸ್ಥಾಪಿತರಾಗಿದ್ದಾರೆ. ಕಟೀಲು, ಧರ್ಮಸ್ಥಳ, ಕೂಡ್ಲು, ಮುಲ್ಕಿ ಮತ್ತು ಕದ್ರಿ ಮೇಳಗಳಲ್ಲಿ ಇಪ್ಪತ್ತು ವರುಷಗಳ ವ್ಯವಸಾಯ ಮಾಡಿರುವ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಸಂದ ಪ್ರಶಸ್ತಿಗಳನೇಕ. ಕಲಾರಂಗ ಪ್ರಶಸ್ತಿ, ಸಂಪಾಜೆ ಯಕ್ಷೋತ್ಸವ ಪ್ರಶಸ್ತಿ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ದೆಹಲಿ ಕರ್ಣಾಟಕ ಸಂಘ ಪ್ರಶಸ್ತಿ , ವಿಟ್ಲ ಜೋಷಿ ಪ್ರತಿಷ್ಠಾನ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ ಇತ್ಯಾದಿ. ಇವರ ತಾಯಿ ಲಕ್ಷ್ಮೀ ಅಮ್ಮ , ಮಡದಿ ಲಕ್ಷ್ಮಿ, ಮಕ್ಕಳು ವೇಣುಗೋಪಾಲ ಮಾಂಬಾಡಿ ಮತ್ತು ನಾರಾಯಣ ಪ್ರಸನ್ನ (ಇವರಿಬ್ಬರೂ ವೃತ್ತಿಯಲ್ಲಿ ಇಂಜಿನಿಯರ್) ಮತ್ತು ಪ್ರವೃತ್ತಿಯಲ್ಲಿ ಹಿಮ್ಮೇಳವಾದಕರು. ತುಂಬು ಜೀವನ ಇವರದಾಗಲಿ.

ಜಾಹೀರಾತು

*******

ಗ್ರಂಥ ಋಣ ಮತ್ತು ಲೇಖನ ಸಿದ್ದಪಡಿಸುವಾಗ ಕೆಲ ಸಂದೇಹ ಪರಿಹರಿಸಿದವರು

1. ಭಾರತೀಯ ಕಾವ್ಯಮೀಮಾಂಸೆ, ಪ್ರೊ.ತೀನಂ ಶ್ರೀಕಂಠಯ್ಯ, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಜಾಹೀರಾತು

2. ಶ್ರೀ ತೋಕೂರು ರಾಮಚಂದ್ರ ಭಟ್ಟ , ವೈದಿಕ ವಿದ್ವಾಂಸರು, ಪಾವಂಜೆ.
3. ಶ್ರೀ ವಿದ್ವಾನ್ ಹರಿನಾರಾಯಣದಾಸ ಅಸ್ರಣ್ಣ, ಕಟೀಲು.
4. ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ, ಹಿರಿಯ ಮದ್ದಳೆಗಾರರು.
5.ಶ್ರೀ ಹರೀಶ ಮಾಂಬಾಡಿ , ಸಂಪಾದಕರು, www.bantwalnews.com
6 .https://sreenivasaraoas.com/tag/classification of /dhwani/.
7. ಹರೀಶ ಬೊಳಂತಿಮೊಗರು, ತಾಳಮದ್ದಳೆ ಅರ್ಥಧಾರಿ

8. ಶ್ರೀ ರವೀಂದ್ರ ಅತ್ತೂರು, ವಿದ್ವಾಂಸರು.

Photo ಕೃಪೆ Madhusudana Alewooraya

ಜಾಹೀರಾತು
  • ಕೃಷ್ಣಪ್ರಕಾಶ ಉಳಿತ್ತಾಯ
    ಈಶಾವಾಸ್ಯ
    ಸದಾಶಿವ ದೇವಸ್ಥಾನದ ಬಳಿ,
    ಪೆರ್ಮಂಕಿ, ಉಳಾಯಿಬೆಟ್ಟು,
    ಮಂಗಳೂರು, ೫೭೪೧೪೫
    9448958972

ಪರಂಪರೆಯ ಹಿನ್ನೊಟ: ಮನೆತನದ ನೋಟ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಚೆಂಡೆ, ಮದ್ದಳೆ ನುಡಿಸಲು ಕಲಿಸುವ ಮಾಂಬಾಡಿ ಸುಬ್ರಹ್ಮಣ್ಯ ಭಟ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*