ಶರತ್ ಹತ್ಯೆ ಹಿಂದು ಕಾರ್ಯಕರ್ತರ ಟಾರ್ಗೆಟ್ ನ ಒಂದು ಭಾಗ: ಡಾ. ಪ್ರಭಾಕರ ಭಟ್

ಭಯೋತ್ಪಾದಕರು, ದೇಶದ್ರೋಹಿಗಳಿಗೆ ಆರೆಸ್ಸೆಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದೇ ಉದ್ದೇಶ, ಶರತ್ ಹತ್ಯೆ ಹಿಂದು ಕಾರ್ಯಕರ್ತರ ಟಾರ್ಗೆಟ್ ನ ಒಂದು ಭಾಗ ಎಂದು ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಸಜೀಪಮುನ್ನೂರು ಗ್ರಾಮದ ಕಂದೂರಿನಲ್ಲಿರುವ ತನಿಯಪ್ಪ ಮಡಿವಾಳ ಅವರ ಮನೆಯ ಪಕ್ಕ ಅವರ ಪುತ್ರ ಶರತ್ ಮಡಿವಾಳ ಸ್ಮರಣೆಗೋಸ್ಕರ ಶರತ್ ಅಭಿಮಾನಿಗಳು ನಿರ್ಮಿಸಿದ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿ, ಪುಷ್ಪನಮನ ಸಲ್ಲಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಡಾ. ಭಟ್, ಕೆಲವು ಸಾವಿರ ವರ್ಷಗಳಿಂದಲೂ ಹಿಂದುಗಳನ್ನು ದಮನಿಸಲು ಸಾಕಷ್ಟು ಮತೀಯವಾದಿಗಳು ಯೋಜಿತ ಹತ್ಯೆಗಳನ್ನು ನಡೆಸುತ್ತಲೇ ಬಂದಿದ್ದು, ಶರತ್ ಹತ್ಯೆ ಅದರ ಮುಂದುವರಿದ ಭಾಗವಾಗಿದೆ. ಇದಕ್ಕೆ ಕಾಂಗ್ರೆಸ್ ನ ರಾಜನೀತಿಯು ಪ್ರೇರಣೆ ನೀಡುತ್ತಿದೆ ಎಂದು ಆಪಾದಿಸಿದರು.

ವೇದಗಳು ಹುಟ್ಟಿದ ಸಿಂಧು, ವಿವೇಕಾಂದರು ಹುಟ್ಟಿದ ಬಂಗಾಳ ನಮ್ಮಲ್ಲಿಲ್ಲ. ಯಶಸ್ವಿಯಾಗಿ ಭಾರತದ ಭೂಪಟದಿಂದ ಮತಾಂಧರು ನಮ್ಮ ಭೂಭಾಗಗಳನ್ನು ಬೇರ್ಪಡಿಸಿದರು, ಆಗಿನ ಧೂರ್ತ ರಾಜಕಾರಣ ಇದಕ್ಕೆ ಕಾರಣವಾಯಿತು. ಇದರ ಮುಂದುವರಿದ ಭಾಗವಾಗಿ ರಾಷ್ಟ್ರವಾದಿ, ಹಿಂದುತ್ವವಾದಿ ಕಾರ್ಯಕರ್ತರ ಹತ್ಯೆಯಾಯಿತು, ಶ್ರದ್ಧಾಕೇಂದ್ರಗಳ ಮೇಲೆ ಆಕ್ರಮಣ ನಡೆದವು, ಶರತ್ ಹತ್ಯೆಯೂ ಇದೇ ಯೋಜಿತ ಕೃತ್ಯದ ಭಾಗ ಎಂದು ಭಟ್ ವಿಶ್ಲೇಷಿಸಿದರು.

ಶರತ್ ಮಾಡಿದ ಕೆಲಸ ಹಿಂದು ಸಮಾಜ ಹಾಗೂ ರಾಷ್ಟ್ರಪ್ರೇಮಿ ಕೆಲಸ. ಹೀಗಾಗಿ ಆತನ ಸಾವು ಅಚಾನಕ್ ಆಗಿ ಆದದ್ದಲ್ಲ. ದೇಶಕ್ಕೋಸ್ಕರ ಶರತ್ ಮಡಿವಾಳ ಮಡಿದಿದ್ದಾನೆ. ಮಹಾಪುರುಷರ ಸಾಲಿಗೆ ಸೇರುವ ವ್ಯಕ್ತಿತ್ವ ಶರತ್ ಮಡಿವಾಳನದ್ದು ಎಂದು ಭಟ್ ಹೇಳಿದರು. ಇದೇ ಸಂದರ್ಭ ಶರತ್ ನೆನಪಿಗಾಗಿ ಗಿಡವೊಂದನ್ನು ನೆಡಲಾಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಶರತ್ ತಂದೆ ತನಿಯಪ್ಪ ಮಡಿವಾಳ, ತಾಯಿ ನಳಿನಿ, ಮುಖಂಡರಾದ ಕೆ.ಹರಿಕೃಷ್ಣ ಬಂಟ್ವಾಳ,  ಬಿ.ದೇವದಾಸ ಶೆಟ್ಟಿ, ಶರಣ್ ಪಂಪ್ ವೆಲ್, ಅಶೋಕ್ ಶೆಟ್ಟಿ ಸರಪಾಡಿ, ಸಂತೋಷ್ ರೈ ಬೋಳಿಯಾರ್, ನವೀನ್ ಸುವರ್ಣ, ವಿನೋದ್ ಕೊಡ್ಮಣ್, ಕೃಷ್ಣಪ್ಪ ಕಲ್ಲಡ್ಕ, ಡಾ.ಕಮಲ ಪ್ರಭಾಕರ ಭಟ್, ರಾಧಾಕೃಷ್ಣ ಅಡ್ಯಂತಾಯ, ಸತೀಶ್, ಲೋಹಿತ್ ಮತ್ತು ಅಪಾರ ಸಂಖ್ಯೆಯಲ್ಲಿ ಶರತ್ ಅಭಿಮಾನಿಗಳು ಸುರಿಯುವ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಮ್ಮದು ಆಕ್ಷನ್ ಅಲ್ಲ, ರಿಯಾಕ್ಷನ್:

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಭಟ್, ನಮ್ಮದು ಆಕ್ಷನ್ ಅಲ್ಲ ರಿಯಾಕ್ಷನ್ ಮಾತ್ರ. ಹಿಂದುಗಳು ಅನ್ಯಾಯವಾದಾಗ ತಿರುಗೇಟು ನೀಡುತ್ತಾರೆಯೇ ವಿನಃ ತಾವಾಗಿಯೇ ಯಾರ ಮೇಲೂ ದಾಳಿ ಮಾಡುವುದಿಲ್ಲ. ಚೆಂಡನ್ನು ಜೋರಾಗಿ ನೆಲಕ್ಕೆಸೆದಾಗ ಅದು ಪುಟಿದೇಳುತ್ತದೆ, ಹಿಂದು ಸಮಾಜ ತನಗಾದ ಅನ್ಯಾಯವನ್ನು ಸಹಿಸುವುದಿಲ್ಲ ಎಂದರು. ಶರತ್ ಹತ್ಯೆಯನ್ನು ಬೆನ್ನತ್ತುವಲ್ಲಿ ಪೊಲೀಸ್ ಇಲಾಖೆಯನ್ನು ಅಂದಿನ ಸರಕಾರ ದಾರಿ ತಪ್ಪಿಸಿತ್ತು ಎಂದ ಭಟ್, ದುರ್ಬಲ ಕೇಸು ಹಾಕಿದರೆ ಆರೋಪಿಗಳಿಗೆ ಜಾಮೀನು ದೊರಕುತ್ತದೆ, ರಾಜಕೀಯ ನಾಯಕರ ಒತ್ತಡ ಇದಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದರು.

ಶರತ್ ಮಡಿವಾಳ ಹತ್ಯೆಯಾಗಿ ಒಂದು ವರ್ಷ, ಸ್ನೇಹಿತರಿಂದ ಸ್ಮಾರಕ ಅರ್ಪಣೆ

 

Be the first to comment on "ಶರತ್ ಹತ್ಯೆ ಹಿಂದು ಕಾರ್ಯಕರ್ತರ ಟಾರ್ಗೆಟ್ ನ ಒಂದು ಭಾಗ: ಡಾ. ಪ್ರಭಾಕರ ಭಟ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*