ಯಕ್ಷಗಾನ ಭಾಗವತ ಹೇಗಿರಬೇಕು?

  • ಹರೀಶ ಮಾಂಬಾಡಿ

www.bantwalnews.com

 

ಜಾಹೀರಾತು

ಕೆಲ ಸಮಯದ ವಿರಾಮದ ಬಳಿಕ ಈ ಅಂಕಣ ಮುಂದುವರಿಯುತ್ತಿದೆ. ಮಾಂಬಾಡಿ ನಾರಾಯಣ ಭಾಗವತರು 1930ರಲ್ಲಿ ನಡೆದ ಕಾಸರಗೋಡಿನ ಕೊರಕ್ಕೋಡುವಿನ ದೇವಿ ಮಹಾತ್ಮೆಯಲ್ಲಿ ಭಾಗವತಿಕೆ ಮಾಡಿದ ನಂತರ ಅವರ ತಾರಾಮೌಲ್ಯವೂ ಹೆಚ್ಚಾಯಿತು. ಅದಾದ ಬಳಿಕ ಮಂಗಲಪಾಡಿ ಮೇಳ, ಮೂಲ್ಕಿ ಮೇಳದಲ್ಲಿ ಭಾಗವತಿಕೆ ನಡೆಸಿದರು. ಮಳೆಗಾಲದಲ್ಲಿ ಹಿಮ್ಮೇಳ ತರಗತಿ. ಈಗ ಅವರ ಪುತ್ರ ಸುಬ್ರಹ್ಮಣ್ಯ ಭಟ್ ತರಗತಿ ಮಾಡುತ್ತಿರುವಂತೆಯೇ 1930-40ರ ಸಮಯದಲ್ಲಿ ಮಾಂಬಾಡಿ ನಾರಾಯಣ ಭಾಗವತರು ಪಂಜ, ಸಂಟ್ಯಾರು, ಮಲಾರು, ಕಣಂತೂರು, ಕೋಳ್ಯೂರು, ಕೆಂಜಾರು, ಮಾಯಿಲೆಂಕಿ, ಬಿಕರ್ನಕಟ್ಟೆ, ಕುಳಾಲು ಕಡೆಗಳಲ್ಲಿ ತರಗತಿಗಳನ್ನು ನಡೆಸುತ್ತಿದ್ದರು ಎಂಬುದು ಉಲ್ಲೇಖನಾರ್ಹ. ಒಂದೊಂದು ತರಗತಿಗಳಲ್ಲೂ 50ರವರೆಗೆ ವಿದ್ಯಾರ್ಥಿಗಳು ಇದ್ದರು ಎಂದು ಅವರ ಅಭಿನಂದನಾ ಗ್ರಂಥ ರಂಗವೈಖರಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಹೀರಾತು

1941ರಲ್ಲಿ ಕಿನ್ನಿಗೋಳಿಯಲ್ಲಿ ಐದು ದಿನಗಳ ಕಾಲ ದೇವಿ ಮಹಾತ್ಮೆ ಆಟ (ಅದರಲ್ಲಿ ಕಡಂದೇಲು ಪುರುಷೋತ್ತಮ ಭಟ್ಟರ ಶ್ರೀದೇವಿ) ಭಾಗವತರಿಗೆ ಮತ್ತಷ್ಟು ಕೀರ್ತಿ ತಂದಿತು. ಅದಾದ ಬಳಿಕ ಮಾಂಬಾಡಿ ಭಾಗವತರು ತೆಂಕುತಿಟ್ಟು ಯಕ್ಷಗಾನದ ಶ್ರೇಷ್ಠರಲ್ಲೋರ್ವರಾದ ಕುರಿಯ ವಿಠಲ ಶಾಸ್ತ್ರಿಗಳ ತಂದೆ ಕುರಿಯ ವೆಂಕಟರಮಣ ಶಾಸ್ತ್ರಿ ಸ್ಥಾಪಿಸಿದ ಕೋಳ್ಯೂರು ಶಂಕರನಾರಾಯಣ ಕೃಪಾಪೋಷಿತ ಯಕ್ಷಗಾನ ನಾಟಕ ಮಂಡಳಿಗೆ ಭಾಗವತರಾದರು. ನೆನಪಿಡಿ. ಇದು 1945ರ ಕಾಲ. ಆಗಲೇ ಯಕ್ಷಗಾನ ಪ್ರಯೋಗದಲ್ಲಿ ಸುಧಾರಣೆಗಳನ್ನು ರೂಪಿಸಿಕೊಂಡು ಈ ತಂಡ ಪ್ರದರ್ಶನ ನೀಡಿತು. ಯಕ್ಷಗಾನ ಆಟದಲ್ಲಿ ಗೆಜ್ಜೆ ಕಟ್ಟುವುದು ಎಂಬುದಕ್ಕೆ ಪವಿತ್ರ ಕಲ್ಪನೆ ಇರುವ ಕಾರಣ ಮಾಂಬಾಡಿ ಭಾಗವತರು ನಾಟಕರೂಪದಲ್ಲಿ ಪ್ರದರ್ಶನ ನೀಡುವ ಕಾರಣ ಗೆಜ್ಜೆ ಕಟ್ಟದೆ ಅಭಿನಯಿಸುವಂತೆ ಹೇಳಿದರು.

ಹೀಗೆ ಒಂದು ವರ್ಷ ಯಶಸ್ವಿಯಾಗಿ ಈ ತಂಡ ಕಾರ್ಯಕ್ರಮ ನೀಡಿತು. ದಿ.ಬಳ್ಳಮಜಲು ರಂಗಪ್ಪಯ್ಯ, ಪುತ್ತೂರು ಗುಂಡೂರಾವ್, ಸಾಯ ಕೃಷ್ಣ ಭಟ್ಟ, ಸಾದಂಗಾಯ ನಾರಾಯಣ ಜೋಯಿಸ, ಹೊಸಹಿತ್ತಿಲು ಗಣಪತಿ ಭಟ್ಟ, ಕಾಡೂರು ರಾಮ ಭಟ್ಟರಂಥವರು ಅಭಿನಯಿಸಿದ ಈ ತಂಡದ ಪ್ರದರ್ಶನಗಳಲ್ಲಿ ಕುರಿಯ ವೆಂಕಟರಮಣ ಶಾಸ್ತ್ರಿ ಹಿರಣ್ಯಕಶಿಪು, ಕುರಿಯ ವಿಠಲ ಶಾಸ್ತ್ರಿಗಳ ಪ್ರಹ್ಲಾದದಂಥ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು. ದಿ.ಬಲಿಪ ನಾರಾಯಣ ಭಾಗವತ, ಮೈಂದಪ್ಪ ರೈಗಳು ಭಾಗವತರಾಗಿ ಮುಂದಿನ ತಿರುಗಾಟಗಳಲ್ಲಿ ಭಾಗವಹಿಸಿದರು.

ಅದಾದ ಬಳಿಕ ಮಾಂಬಾಡಿ ಭಾಗವತರು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಡಿಮೆ ಮಾಡಿ, ಹಿಮ್ಮೇಳ ತರಗತಿಗಳನ್ನು ನಡೆಸುವುದತ್ತ ಮನ ಮಾಡಿದರು.

ಜಾಹೀರಾತು

1970ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಸಂದರ್ಭ ಸನ್ಮಾನ, 1972ರಲ್ಲಿ ಕಾಸರಗೋಡಿನ ಪಾರ್ತಿಸುಬ್ಬ ಮಂಟಪದಲ್ಲಿ ಸನ್ಮಾನ, 1979ರಲ್ಲಿ ಪುತ್ತೂರಿನಲ್ಲಿ ಸನ್ಮಾನ, 1980ರಲ್ಲಿ ಬನಾರಿಯಲ್ಲಿ ಸನ್ಮಾನ, 1971ರಲ್ಲಿ ಮಂಚಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ತೆಂಕುತಿಟ್ಟಿನ ಪ್ರತಿನಿಧಿಯಾಗಿ ಭಾಗವಹಿಸುವಿಕೆ, 1981ರಲ್ಲಿ ಹುಟ್ಟೂರ ಸನ್ಮಾನ ಪಡೆದ ಮಾಂಬಾಡಿ ಭಾಗವತರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆರಂಭಗೊಂಡ ಯಕ್ಷಗಾನ ಶಿಕ್ಷಣ ಕೇಂದ್ರದಲ್ಲಿ ಹಿಮ್ಮೇಳದ ಪ್ರಥಮ ಹಿಮ್ಮೇಳ ಶಿಕ್ಷಕರಾದರು. ಈ ಸಂದರ್ಭವೇ ಪದ್ಯಾಣ ಗಣಪತಿ ಭಟ್ಟರಂಥ ಹಲವಾರು ಮಂದಿ ಮಾಂಬಾಡಿ ಶಿಷ್ಯರಾಗಿ ಪ್ರಸಿದ್ಧಿಗೆ ಬಂದರು.

ಹಿಮ್ಮೇಳ ತರಗತಿ ನಡೆಸುವುದರಲ್ಲಿ ಆನಂದ ಹೊಂದುತ್ತಾ, ಮಾಂಬಾಡಿ ಭಾಗವತರು ಯಕ್ಷಗಾನದ ಕುರಿತು ಟಿಪ್ಪಣಿಗಳನ್ನು ಮಾಡುತ್ತಿದ್ದರು. ಅದರ ಸಂಗ್ರಹವೊಂದನ್ನು ಇಲ್ಲಿ ಪ್ರಕಟಿಸಲಾಗಿದೆ.

ಜಾಹೀರಾತು

ಇದರಲ್ಲಿ ಇರುವ ವಿಚಾರವೇ

ಯಕ್ಷಗಾನ ಭಾಗವತ ಹೇಗಿರಬೇಕು?

ಮಾಂಬಾಡಿ ನಾರಾಯಣ ಭಾಗವತರ ಅಭಿನಂದನಾ ಗ್ರಂಥ (1981ರಲ್ಲಿ ಪ್ರಕಟಗೊಂಡದ್ದು)ದಲ್ಲಿರುವ ಅವರ ಸಂದರ್ಶನದಲ್ಲಿ ಪ್ರಶ್ನೆಯೊಂದಿದೆ. ಭಾಗವತರ ಪದ್ಯಗಳು ಅರ್ಥವಾಗುವ ಹಾಗೆ ಹಾಡಿಕೆಯ ಶೈಲಿಯಲ್ಲಿರಬೇಕೇ ಅಥವಾ ಪಾತ್ರಗಳೇ ಪ್ರತ್ಯೇಕವಾಗಿ ಅರ್ಥ ಹೇಳುವುದರಿಂದ ಹಾಡಿನ ಅರ್ಥ ಗೌಣವೆನಿಸಬಹುದೇ? ಇದಕ್ಕೆ ಮಾಂಬಾಡಿ ಭಾಗವತರು ಹೀಗೆ ಉತ್ತರಿಸುತ್ತಾರೆ. ಅರ್ಥವತ್ತಾಗಿ ಶಬ್ದ ಕೆಡಿಸದೆ ಹಾಡಬೇಕು. ಆಗ ಆ ಪದ್ಯದ ಭಾವವನ್ನು ಪಾತ್ರಗಳು ಅಭಿನಯಿಸಿ ತೋರಿಸಬೇಕು. ಇಲ್ಲಿ ಆಂಗಿಕ ವಾಚಿಕಾಭಿನಯಗಳ ಬೆಸುಗೆ ಚೆನ್ನಾಗಿರಬೇಕು. ಆಗ ತಾನೇ ರಸಾಸ್ವಾದ ಸಾಧ್ಯ. ಯಕ್ಷಗಾನದ ಮೂಲಸ್ವರೂಪವೇ ಇದು. ಆ ಬಳಿಕ ಪದ್ಯದ ಅರ್ಥವನ್ನು ಬೇಕಾದ ಹಾಗೆ ವಿವರಿಸಬಹುದು. ಅದು ಬೇರೆ ಮಾತು. ಹಾಡಿಕೆ ಅರ್ಥವಾಗುವಂತೆ ಇರಬೇಕು ಎಂಬುದರಲ್ಲಿ ಎರಡು ಮತವಿಲ್ಲ.

ಜಾಹೀರಾತು

ಆ ಸಂದರ್ಶನದ ಆಯ್ದ ಪಾಯಿಂಟ್ ಗಳು ಇಲ್ಲಿವೆ… ಇದು ಯಕ್ಷಗಾನಕ್ಕೆ ಸಾರ್ವಕಾಲಿಕವಾಗಿಯೂ ಪ್ರಸ್ತುತ ಎಂಬಂತಿದೆ.

  • ಪ್ರಸಂಗಕರ್ತನಿಗೆ ರಾಗ, ತಾಳಗಳ ಪರಿಚಯ ಚೆನ್ನಾಗಿರಬೇಕು. ಇಲ್ಲದಿದ್ದರೆ ಕೇವಲ ಅನುಕರಣೆಯಾದೀತು.
  • ಒಂದು ರಾಗ, ಹತ್ತಾರು ಭಾವಗಳನ್ನು ಬಿಂಬಿಸಬಲಲುದು, ಅದು ಹಾಡುವವನನ್ನು ಹೊಂದಿರುತ್ತದೆ. ಕೆಲವು ಸಲ ಪದ್ಯದ ಭಾವವೇ ಬೇರೆ, ರಾಗದ ಭಾವವೇ ಬೇರಾಗಿ ಕಾಣಬಹುದು. ಅದು ಕೌಶಲ್ಯ.
  • ಬಯಲಾಟದ ಸೂತ್ರಧಾರನೇ ಭಾಗವತ. ರಸಭಾವಗಳು ಅವನಿಂದಲೇ ಆವಿಷ್ಕಾರ ಹೊಂದಬೇಕು. ವೇಷವಿಲ್ಲದ ತಾಳಮದ್ದಳೆಯಲ್ಲೂ ಭಾಗವತನಿಲ್ಲದೆ ಇಲ್ಲ. ಭಾಗವತ ಶ್ರುತಿಬದ್ಧವಾಗಿ ಹಾಡುತ್ತಲೇ ಪ್ರೇಕ್ಷಕರಲ್ಲಿ ಭಾವ ಸ್ಪಂದಿಸತೊಡಗುತ್ತದೆ. ಅದನ್ನೇ ಅಭಿನಯಿಸಿ, ವೇಷದ ಮೂಲಕ, ನೃತ್ಯದ ಮೂಲಕ, ಮಾತುಗಳಿಂದ ಮತ್ತೆ ವಿಸ್ತಾರಗೊಳ್ಳುತ್ತದೆ. ನಾಟಕದ ಸೂತ್ರಧಾರನಿಗೂ, ಬಯಲಾಟದ ಸೂತ್ರಧಾರನಾದ ಭಾಗವತನಿಗೂ ಬಹಳ ವ್ಯತ್ಯಾಸವಿದೆ. ಚೌಕಿಯಲ್ಲಿನ ಗಣಪತಿಪೂಜೆಯಿಂದ ತೊಡಗಿ, ಮಂಗಳಾಶೀರ್ವಾದದವರೆಗೂ ಇಲ್ಲಿ ಭಾಗವತನ ಕೆಲಸ ಪ್ರಧಾನ.
  • ಯಕ್ಷಗಾನದಲ್ಲಿ ಚೆಂಡೆ, ಮದ್ದಳೆ, ವೇಷ, ಅಭಿನಯ ಭಾಗವತನ ಕೈಸನ್ನೆ, ಕಣ್ಣುಸನ್ನೆಯಿಂದಲೇ ನಡೆಯಬೇಕು. ಅವನಿಲ್ಲದೆ ಅಥವಾ ಅವನ ಪದ್ಯಕ್ಕೆ ವಿರೋಧವಾಗಿಯೋ, ಗತಿ ಬದಲಿಸಿಯೋ, ಯಾವುದನ್ನೂ ಇಲ್ಲಿ ಮಾಡುವ ಹಾಗಿಲ್ಲ. ಅವನೇ ರಂಗಸ್ಥಳದ ನಿರ್ದೇಶಕ. ಹಾಡು ಮುಗಿದೊಡನೆ ಅರ್ಥ ಹೇಳಲು ತೊಡಗುತ್ತಾರೆ. ಅರ್ಥ ಉದ್ದವಾದರೆ ಮಧ್ಯದಲ್ಲಿ ರಸಭಂಗವಾಗಬಹುದು. ಆಗ ಹಾಡನ್ನು ಎತ್ತಿ ಮುಂದಿನ ಕತೆಯನ್ನು ಕೂಡಿಸುವ ಸ್ವಾತಂತ್ರ್ಯ ಭಾಗವತನಿಗಿದೆ.
  • ಮುಖ್ಯವಾಗಿ ಭಾಗವತ ರಸೋತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿರಬೇಕು. ವೀರರಸನ, ಶೋಕರಸವಿರಲಿ, ಭಾವದೊಂದಿಗೆ ಹಾಡಿದಾಗ, ಪಾತ್ರಧಾರಿಗಳೂ ತಲ್ಲೀನರಾಗುತ್ತಾರೆ.
  • ಯಕ್ಷಗಾನ ಪದ್ಯಗಳು ಯತಿಗನುಸಾರವಾಗಿ ರಾಗಯುಕ್ತವಾಗಿ ಹಾಡಬೇಕು. ಉದಾಹರಣೆಗೆ: ಯತಿ ಅಕಾರದಲ್ಲಿದ್ದರೆ ಅಕಾರದಲ್ಲೇ ರಾಗವಿರಬೇಕು. ಹಾಗೆಯೇ ಇಕಾರ, ಉಕಾರ, ಎಕಾರ, ಒಕಾರಗಳನ್ನು ಅನುಸರಿಸಿ ರಾಗಾಲಾಪನೆ ಇರಬೇಕು. ಹಾಡುವ ಪದ್ಯ ಪಂಡಿತರಿಂದ ಪಾಮರರವರೆಗೆ ಸಭಿಕರಿಗೆಲ್ಲ ವೇದ್ಯವಾಗುವ ರೀತಿಯಲ್ಲಿರಬೇಕು.
  • ಆರೋಹಣ, ಅವರೋಹಣ ಸ್ವರಗಳು ಶುದ್ಧವಾಗಿರಬೇಕು. ರಾಗಗಳನ್ನು ಹೆಚ್ಚು ಎಳೆಯಬಾರದು.

(ಕೃಪೆ: ರಂಗವೈಖರಿ)

ಹಳೇ ಲೇಖನಗಳ ಲಿಂಕ್ ಗೆ ಕ್ಲಿಕ್ ಮಾಡಿರಿ:

ಜಾಹೀರಾತು

1941ರ ಐದು ದಿನಗಳ ಕಿನ್ನಿಗೋಳಿಯ ದೇವಿ ಮಹಾತ್ಮೆ ಹೇಗಿತ್ತು?

1919ರಲ್ಲೇ ಆರಂಭವಾಯಿತು ಹಿಮ್ಮೇಳ ಕ್ಲಾಸು!

ಜಾಹೀರಾತು

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಯಕ್ಷಗಾನ ಭಾಗವತ ಹೇಗಿರಬೇಕು?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*