ತುಳು ಭಾಷೆ, ಸಂಸ್ಕೃತಿ ಉಳಿವಿಗೆ ಸಾಹಿತ್ಯ ಸಮ್ಮೇಳನ

  • ಡಿ.10ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಸಮ್ಮೇಳನ
  • ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜನೆ
  • ಮಲಾರು ಜಯರಾಮ ರೈ ಅಧ್ಯಕ್ಷತೆಯಲ್ಲಿ ಇಡೀ ದಿನ ಸಂಭ್ರಮ

 ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬಂಟ್ವಾಳ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಆಶ್ರಯದಲ್ಲಿ ಡಿಸೆಂಬರ್ 10 ರಂದು ಬೆಳಿಗ್ಗೆ 9ಗಂಟೆಯಿಂದ ರಾತ್ರಿ 9ಗಂಟೆಯ ವರೆಗೆ ಬಿ.ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಬಂಟ್ವಾಳ ತಾಲೂಕಿನ ಪ್ರಥಮ ತುಳು ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಈ ವಿಷಯವನ್ನು ಬಂಟ್ವಾಳ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸುದರ್ಶನ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಸಮ್ಮೇಳನಾಧ್ಯಕ್ಷರಾಗಿರುವರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಮ್ಮೇಳನ ಉದ್ಘಾಟಿಸುವರು. ವಸ್ತುಪ್ರದರ್ಶನವನ್ನು ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಉದ್ಘಾಟಿಸುವರು. ಬೆಳಗ್ಗೆ 9 ಗಂಟೆಗೆ ತುಳುವೆರೆ ದಿಬ್ಬಣವನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಉದ್ಘಾಟಿಸುವರು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ತುಳುನಾಡ ಐಸಿರ, ಚಾವಡಿ ಪಟ್ಟಾಂಗ, ಪಾರಿ ಪಾಡ್ದನ, ಉರಲ್ ಬೀರ, ಸಂದಿ ಪನ್ಪುನಿ, ಪಿರಾಕ್ದ ತುಳು ಪದಕ್ಲೊನ್ ಪನ್ಪುನಿ, ಕಬಿ ಕೂಟ ಇರಲಿದೆ. ತುಳು ರಂಗ್ ರಂಗಿತೊ ಲೇಸ್, ತಮ್ಮನದ ಲೇಸ್ ಇರಲಿದ್ದು, ಗಿರಿರಾಜ ವಗ್ಗ, ಕಾಂತಪ್ಪ ಶೆಟ್ಟಿ ಅಗರಿ, ಬಿ.ಆರ್.ಕುಲಾಲ್ ಬಿ.ಸಿ.ರೋಡ್, ವಾಸು ಪಂಡಿತ ಸರಪಾಡಿ, ಅಣ್ಣು ಪೂಜಾರಿ ಅಮ್ಟಾಡಿ, ಗೌರಿ ಪಾಲ್ತಾಜೆ, ಎಸ್.ರಹಿಮಾನ್ ಸಾಹೇಬ್ ಇರ್ವತ್ತೂರು, ಮೀನಾಕ್ಷಿ ಆಚಾರ್ಯ ಬಿ.ಸಿ.ರೋಡ್, ವಿಶ್ವನಾಥ ಶೆಟ್ಟಿ ಸೋರ್ನಾಡು, ನಾರಾಯಣ ದಾಸ್ ಕಕ್ಯಪದವು, ಅಂತೋನಿ ಪಿಂಟೋ ಪೆರ್ನೆ, ಶಶಿ ಬಂಡಿಮಾರ್, ಶೇಖರ ಪಂಬದ ಸಜಿಪ ಅವರನ್ನು ಸನ್ಮಾನಿಸಲಾಗುವುದು.

ಸಮಾರೋಪದಲ್ಲಿ ಹಾವೇರಿ ಜಾನಪದ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಸಮಾರೋಪ ಭಾಷಣ ಮಾಡುವರು. ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಮತ್ತು ದೇಜಪ್ಪ ಬಾಚಕೆರೆ ಅವರಿಗೆ ತುಳು ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ತುಳು ಯಕ್ಷ ಹಾಸ್ಯ ವೈಭವ, ತುಳು ಜಾನಪದ ನಲಿಕೆಲು ಸಂಜೆ ಬಳಿಕ ರಾತ್ರಿವರೆಗೆ ಇರಲಿದೆ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಕಾಡೆಮಿ ಜನರ ಕಡೆಗೆ ಕಾರ್ಯಕ್ರಮದ ಅಂಗವಾಗಿ ತುಳುನಾಡಿನ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ತುಳು ಸಾಹಿತ್ಯ, ಸಂಸ್ಕೃತಿ-ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಜನರಿಗೆ ಅವಕಾಶ ಕಲ್ಪಿಸುವ ಉದ್ದೇಶವನ್ನು ಪ್ರಧಾನವಾಗಿರಿಸಿಕೊಂಡು ಈ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ. ತುಳು ಭಾಷಾ ಚಳವಳಿಯಲ್ಲಿ ಲಿಖಿತ ಸಾಹಿತ್ಯದ ಜತೆಯಲ್ಲಿ ಮೌಖಿಕ ಸಾಹಿತ್ಯ ಕೂಡಾ ಜಾನಪದ ಸಾಹಿತ್ಯದ ನೆಲೆ ಗಟ್ಟಿನಲ್ಲಿ ಪ್ರಧಾನವಾಗುತ್ತದೆ ಎಂದು ಅವರು ಹೇಳಿದರು.

ತುಳು ಜನಪದ ಸಾಹಿತ್ಯದಲ್ಲಿ ಪಾಡ್ದನ-ಪಾರಿ, ಉರಲ್, ಬೀರ, ಸಂಧಿ ಮೊದಲಾದವುಗಳನ್ನು ಇಂದಿಗೂ ಉಳಿಸಿಕೊಂಡಿರುವುದು ಗ್ರಾಮೀಣ ಭಾಗದ ಅನಕ್ಷರಸ್ಥರು. ತುಳು ಭಾಷೆಯ ಪ್ರಾಚೀನತೆ, ಹಿರಿಮೆ, ಗರಿಮೆಯನ್ನು ತಿಳಿಸುವ ಲಿಖಿತ ಸಾಹಿತ್ಯಕ್ಕೂ ಮೌಖಿಕ ಸಾಹಿತ್ಯವು ಮೂಲ ಆಕರವಾಗಿ ಸಿಗುತ್ತದೆ ಎಂದರು.

ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ತುಳು ಮೌಖಿಕ ಸಾಹಿತ್ಯವನ್ನು ಇಂದಿಗೂ ಉಳಿಸಿಕೊಂಡು ಬಂದಿರುವವರಿಗೆ ಸಮ್ಮೇಳನದಲ್ಲಿ ವಿಶೇಷ ಅವಕಾಶಗಳನ್ನು ಒದಗಿಸಲಾಗುತ್ತಿದೆ. ತುಳು ನಾಡಿನ ’ತುಳುವೆರೆ ಗೊಬ್ಬುಲು ಇತರ ಕ್ರೀಡಾ ಪ್ರಾಕಾರಗಳಿಂದ ಭಿನ್ನವಾಗಿದ್ದು ತುಳುವರ ಬುದ್ದಿವಂತಿಕೆಗೆ ಹೆಸರಾಗಿದೆ. ಇಂದಿನ ಆಧುನಿಕ ಕ್ರೀಡೆಗಳ ಭರಾಟೆಯೊಂದಿಗೆ ತುಳುವರ ಕ್ರೀಡೆಗಳು ಮರೆಯಾಗುತ್ತಿದೆ. ತುಳುವರ ಕ್ರೀಡೆಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಸಮ್ಮೇಳನದಲ್ಲಿ ’ತುಳುವೆರೆ ಗೊಬ್ಬಲು ಎಂಬ ಪರಿಕಲ್ಪನೆಯೊಂದಿಗೆ ವ್ಯವಸ್ಥೆಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತುಳುನಾಡಿನಲ್ಲಿ ವಿವಿಧ ಜಾತಿ ಸಮುದಾಯದ ಕುಲಕಸುಬು ಪ್ರಧಾನ ಪಾತ್ರವಹಿಸಿದ್ದು ಇಂದಿನ ದಿನದಲ್ಲಿ ಆಧುನಿಕ ಜೀವನದ ಅನುಕರಣೆಯಲ್ಲಿ ಕುಲಕಸುಬು ಜನಮಾನಸದಿಂದ ದೂರವಾಗುತ್ತಿದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಅಗತ್ಯವೆಂದು ಪರಿಗಣಿಸಿ ಕುಲಕಸುಬುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದಕ್ಕಾಗಿ ಕುಲಕಸುಬುಗಳ ಪ್ರಾತ್ಯಕ್ಷಿಕೆ ಮತ್ತು ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪುಸ್ತಕ ಪ್ರದರ್ಶನ-ಮಾರಾಟ, ತುಳುನಾಡಿನ ಬದುಕು ಮತ್ತು ಸಂಸ್ಕೃತಿ ಬಿಂಬಿಸುವ ಹಳೇ ವಸ್ತುಗಳ ಪ್ರದರ್ಶನ ಕೂಡಾ ಇದೆ. ತುಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗುರುತಿಸಿ ಸನ್ಮಾನ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ. ಜತೆಗೆ ಕವಿಗೋಷ್ಠಿ, ಚಾವಡಿ ಪಟ್ಟಾಂಗ ಮೊದಲಾದ ಕಾರ್‍ಯಕ್ರಮಗಳು ನಡೆಯಲಿದೆ.

ಬಂಟ್ವ್ವಾಳ ತಾಲೂಕು ತುಳು ಸಾಹಿತ್ಯ ಸಮ್ಮೇಳನವು ತುಳು ಭಾಷಾ ಚಳವಳಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿದ್ದು ಈ ಕಾರ್ಯಕ್ರಮ ಇತರರಿಗೆ ಪ್ರೇರಣೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಲೂಕಿನ ಎಲ್ಲಾ ವರ್ಗದ, ವಿವಿಧ ಜಾತಿ ಸಮುದಾಯದ, ವಿವಿಧ ಕ್ಷೇತ್ರಗಳ ಪ್ರಮುಖರು ಶಕ್ತಿಮೀರಿ ಪ್ರಯತ್ನಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಅವರು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಎ.ಗೋಪಾಲ ಅಂಚನ್, ಪ್ರಮುಖರಾದ ಡಿ.ಎಂ.ಕುಲಾಲ್, ಮೋಹನದಾಸ ಕೊಟ್ಟಾರಿ, ಗಂಗಾಧರ ಭಟ್, ಸುಭಾಶ್ಚಂದ್ರ ಜೈನ್, ಟಿ.ಶೇಷಪ್ಪ ಮೂಲ್ಯ, ಮಧುಸೂಧನ ಶೆಣೈ, ಪರಮೇಶ್ವರ ಮೂಲ್ಯ, ನಾರಾಯಣ ಪೆರ್ನೆ, ಚಂದ್ರಶೇಖರ ಗಟ್ಟಿ, ಸದಾಶಿವ ಪುತ್ರನ್, ಮುರಳೀಧರ ಶೆಟ್ಟಿ, ಮೋಹನ ರಾವ್, ಸುಕುಮಾರ್ ಬಂಟ್ವಾಳ, ಎಚ್.ಕೆ.ನಯನಾಡು ಮೊದಲಾದವರು ಉಪಸ್ಥಿತರಿದ್ದರು.

Be the first to comment on "ತುಳು ಭಾಷೆ, ಸಂಸ್ಕೃತಿ ಉಳಿವಿಗೆ ಸಾಹಿತ್ಯ ಸಮ್ಮೇಳನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*