2001ರಲ್ಲಿ ಶಿಲಾನ್ಯಾಸಗೊಂಡ ಜಾಗದಲ್ಲಿ ಕೊನೆಗೂ ಕನ್ನಡ ಭವನ ನಿರ್ಮಾಣ

www.bantwalnews.com

ಬಂಟ್ವಾಳ ತಾಲೂಕಿನಲ್ಲಿ ಹಲವು ಸಾಹಿತ್ಯ ಸಮ್ಮೆಳನಗಳು ನಡೆದವು. ಭಾಷಣ, ಗೋಷ್ಠಿ, ಭೋಜನ, ಪುಸ್ತಕ ಪ್ರದರ್ಶನಗಳು ಕೊನೆಗೆ ಸಮಾರೋಪದಲ್ಲಿ ನಿರ್ಣಯಗಳು… ಹೀಗೆ ಸಮ್ಮೇಳನಗಳು ಸಮಾಪ್ತಗೊಂಡವೇ ವಿನ: ನಿರ್ಣಯಗಳು ಯಾರ ಕಿವಿಗೂ ಕೇಳಲಿಲ್ಲ ಎಂಬ ಸಾಹಿತ್ಯ ಅಭಿಮಾನಿಗಳ ಕೊರಗು ಇಂದು ನಿನ್ನೆಯದಲ್ಲ.

ಜಾಹೀರಾತು

ಇದಕ್ಕೆ ಕಾರಣವೂ ಇದೆ. 2001ರಲ್ಲಿ ಶಿಲಾನ್ಯಾಸ ನಡೆದಿದ್ದ ಕನ್ನಡ ಭವನ ಇನ್ನೂ ತಲೆಎತ್ತಲಿಲ್ಲ ಎಂಬ ನಿರಾಸೆ ಸಾಹಿತ್ಯಾಭಿಮಾನಿಗಳಿಗಿತ್ತು.

ಬಿ.ಸಿ.ರೋಡಿನಲ್ಲಿ ಕೈಕುಂಜೆ ಬಳಿ ಮೆಸ್ಕಾಂ ವಿಭಾಗೀಯ ಕಚೇರಿ ಸಮೀಪ ಶಿಲಾನ್ಯಾಸ ನಡೆದ ಜಾಗದಲ್ಲಿ ಈಗ ಕನ್ನಡ ಭವನ ನಿರ್ಮಾಣ ಆರಂಭಗೊಂಡಿದೆ. ತನ್ಮೂಲಕ ಸಾಹಿತ್ಯಾಭಿಮಾನಿಗಳ ಮೊಗದಲ್ಲಿ ಸಂತಸವೂ ತಂದಿದೆ.

ಜಾಹೀರಾತು

ಕನ್ನಡ ಪರ ಚಟುವಟಿಕೆಗಳ ಕಟ್ಟಡವೊಂದು ನಿರ್ಮಾಣವಾಗಲು ಅಷ್ಟು ಕಾಲ ಬೇಕಾಯಿತು ಎಂಬುದೇ ವಿಪರ್ಯಾಸ. 2001ರಲ್ಲಿ ನೀರ್ಪಾಜೆ ಭೀಮ ಭಟ್ಟರ ಅಧ್ಯಕ್ಷತೆಯಲ್ಲಿ ಮೊಡಂಕಾಪುವಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್, ಕೈಕುಂಜದಲ್ಲಿರುವ ಈ ಜಾಗದಲ್ಲಿ ಶಿಲಾನ್ಯಾನ ನೆರವೇರಿಸಿದ್ದರು. ಕನ್ನಡ ಭವನ ನಿರ್ಮಾಣದ ಕನಸನ್ನು ಹೊತ್ತುಕೊಂಡು ಅಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿತ್ತು.

ಅದಾದ ಬಳಿಕ ಮತ್ತೊಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ಬಂಟ್ವಾಳದಲ್ಲಾಯಿತು. ಹಲವು ತಾಲೂಕು ಸಮ್ಮೇಳನಗಳು ನಡೆದವು. ನೀರ್ಪಾಜೆ ಭೀಮ ಭಟ್ಟರು ಕೊನೆಗಾಲದವರೆಗೂ ಕನ್ನಡ ಭವನ ನಿರ್ಮಾಣದ ಕನಸನ್ನು ಕಂಡಿದ್ದರು. ಅವರ ಬಳಿಕ ಬಂದ ಎಲ್ಲ ಕಸಾಪ ತಾಲೂಕು ಅಧ್ಯಕ್ಷರೂ ಕನ್ನಡ ಭವನ ನಿರ್ಮಾಣ ಕುರಿತು ಒತ್ತಡ ತರುತ್ತಿದ್ದರು. ಆದರೇಕೋ, ಭವನ ನಿರ್ಮಾಣಕ್ಕೆ ಮುಹೂರ್ತ ಸಿಗಲೇ ಇಲ್ಲ. ಪ್ರತಿಯೊಂದು ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಈ ಕುರಿತು ಧ್ವನಿ ಎತ್ತಲಾಯಿತಾದರೂ ಅದು ಭರವಸೆಯಾಗಿಯೇ ಉಳಿದಿತ್ತು.

ಕಳೆದ ವರ್ಷ ಭವನ ನಿರ್ಮಾಣಕ್ಕೆ ವೇಗ ದೊರಕಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 5 ಸೆಂಟ್ಸ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ 3 ಸೆಂಟ್ಸ್ ಹೀಗೆ ಒಟ್ಟು 8 ಸೆಂಟ್ಸ್ ಜಾಗದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕಳೆದ ನವೆಂಬರ್ ವೇಳೆ ಒಡಿಯೂರು ಶ್ರೀ ದತ್ತಗುರು ವೀರಾಂಜನೇಯ ಸ್ವಾಮೀಜಿ ಆಶೀರ್ವಾದದೊಂದಿಗೆ ಭೂಮಿಪೂಜೆ ನಡೆಸಲಾಯಿತು. ಮಾಸ್ಟರ್ ಪ್ಲ್ಯಾನರಿ, ನಿರ್ಮಿತಿ ಕೇಂದ್ರದಡಿಯಲ್ಲಿ ಒಂದು ಮಹಡಿಯ ಭವನ 4 ಸಾವಿರ ಚದರ ಅಡಿಯ ವಿಸ್ತಿರ್ಣದ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆಯಿತು.

ಜಾಹೀರಾತು

ಈ ಕಟ್ಟಡದ ಒಟ್ಟು ಅಂದಾಜು ವೆಚ್ಚ 60 ಲಕ್ಷ ರೂ. ಎನ್ನುತ್ತಾರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಮೋಹನ ರಾವ್. ಕೆಳಗೆ 2 ಸಾವಿರ ಮೇಲೆ 2 ಸಾವಿರ ಹೀಗೆ ಒಟ್ಟು 4 ಸಾವಿರ ಚ.ಅಡಿಯ ವಿಸ್ತೀರ್ಣದಲ್ಲಿ ನೆಲ ಅಂತಸ್ತಿನಲ್ಲಿ ಎರಡು ಗ್ರೀನ್ ರೂಮ್, ಎರಡು ಕೊಠಡಿಗಳು, ಎದುರು ರಂಗಮಂದಿರ ಇರುತ್ತದೆ, ಮೊದಲ ಮಹಡಿಯಲ್ಲಿ ಸಭಾಂಗಣ ಇರುತ್ತದೆ. ಸುಮರು 200 ಮಂದಿ ಭಾಗವಹಿಸುವ ಕಾರ್ಯಕ್ರಮಗಳಿಗೆ ತೊಂದರೆ ಇಲ್ಲ. ಕಾರ್ಯಾಗಾರ, ಸಭೆ, ತಾಳಮದ್ದಳೆ, ಮೀಟಿಂಗ್ ಸಹಿತ ಹಲವು ಚಟುವಟಿಕೆಗಳನ್ನು ನಡೆಸಲು ಈ ಕಟ್ಟಡದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಮೋಹನ ರಾವ್ ಬಂಟ್ವಾಳನ್ಯೂಸ್ ಗೆ ತಿಳಿಸಿದರು.

ಈಗಾಗಲೇ ಸಚಿವ ಬಿ.ರಮಾನಾಥ ರೈ ಅವರು ತಮ್ಮ ಶಾಸಕ ನಿಧಿಯಿಂದ 5 ಲಕ್ಷ ರೂ ಒದಗಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರೂ ತಮ್ಮ ನಿಧಿಯಿಂದ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ರಾಜ್ಯ ಸಾಹಿತ್ಯ ಪರಿಷತ್ತು, ತಾಲೂಕಿನ ಗ್ರಾಮ ಪಂಚಾಯತ್ ಗಳು, ಸಹಕಾರ ಸಂಘಗಳು ಮತ್ತು ದಾನಿಗಳ ನೆರವಿನಿಂದ ಕಟ್ಟಡ ನಿರ್ಮಿಸಲಾಗುವುದು ಎಂದು ರಾವ್ ಹೇಳಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "2001ರಲ್ಲಿ ಶಿಲಾನ್ಯಾಸಗೊಂಡ ಜಾಗದಲ್ಲಿ ಕೊನೆಗೂ ಕನ್ನಡ ಭವನ ನಿರ್ಮಾಣ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*